ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ಶಾಲೆ ಹಾಗೂ ಕಾಲೇಜುಗಳಿಗೆ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿಗೆ ಜಾರಿ ಮಾಡಿರುವ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಸಂಘದ ನೇತೃತ್ವದಲ್ಲಿ ಉಪನ್ಯಾಸಕರು ಶಿಕ್ಷಕರು, ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ಮೂಲಕ ಸಿ ಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ಮಾತನಾಡಿ, ”ಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಾತಿಯಲ್ಲಿ ಪ್ರವೇಶ ಪರೀಕ್ಷೆ ನಿಯಮ ಸಂಪೂರ್ಣ ರದ್ದುಗೊಳಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕರ, ಉಪನ್ಯಾಸಕರ ಶ್ರಮಕ್ಕೆ ಬೆಲೆ ಕೊಟ್ಟು, ಈ ವರ್ಷವೂ ಅವರನ್ನೇ ಮುಂದುವರಿಸ ಬೇಕು. ಸರಕಾರದ ನೇಮಕಾತಿಯಲ್ಲಿ ಶೇ.25ರಷ್ಟು ಕೃಪಾಂಕ ನೀಡಬೇಕು. ಸೇವಾ ಭದ್ರತೆ ಒದಗಿಸಿ ಮಾಸಿಕ ಕನಿಷ್ಠ 35,000 ರೂ. ಗೌರವ ಧನ ನೀಡಬೇಕು,” ಎಂದು ಆಗ್ರಹಿಸಿದರು.
ಶಾಂತಕುಮಾರ ಭಾವಿಕಟ್ಟಿ ಮಾತನಾಡಿ, “ಮಹಿಳಾ ಶಿಕ್ಷಕರಿಗೆ ಪ್ರಸೂತಿ ರಜೆ ಜತೆಗೆ ವೇತನ ಒದಗಿಸಬೇಕು. ವರ್ಷದ 12 ತಿಂಗಳು ವೇತನ ಪಾವತಿಸಬೇಕು. ಜೀವ ವಿಮಾ ಸೌಲಭ್ಯ ಕಲ್ಪಿಸಬೇಕು. ಹಿಂದಿ ಭಾಷಾ ವಿಷಯವನ್ನು ಐಚ್ಛಿಕವಾಗಿಡದೆ ಕಡ್ಡಾಯ ಮೂಲ ಪರಿಗಣಿಸಬೇಕು. ಈಗಿರುವ ಅತಿಥಿ ಶಿಕ್ಷಕರನ್ನೇ ಮುಂದುವರಿಸದೆ ಪರೀಕ್ಷಾ ಕ್ರಮ ಮಾಡಿದರೆ ಕುಟುಂಬ ಸಮೇತ ಇಲಾಖೆ ಮುಂದೆ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ | ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಘೋಷಣೆಗೆ ದವಿಪ ಮನವಿ
ಈ ವೇಳೆ ಛತ್ರಪ್ಪ ಭಜಂತ್ರಿ, ವಿಕ್ರಮ ಮುದ್ದೇಬಿಹಾಳ, ಸಾಬಣ್ಣ ಬಸರಕೋಡ, ಶಿವರಾಜ ಮಾಲಗತ್ತಿ, ಬಾನು ಹೆಬ್ಬಾಳ, ಅಸ್ಮಾ ಬಾಗವಾನ, ಸಿ.ಮಹಾಂತೇಶ, ಸಿದ್ದಾರ್ಥ ಲಚ್ಯಾಣ, ಸುರೇಶ ವಾಲಿಕಾರ, ಮಹಾಂತೇಶ ಸಲಬಣ್ಣವರ, ಜಿ ಡಿ ಬೀಳಗಿ, ವಿ ಬಿ ನಾಯಕ, ಸಂಜು ಬನಸೋಡೆ, ಬಸವರಾಜ ಜಂಬಗಿ, ಜಬ್ಬಾರ ಕವಠ, ಭೀಮಾಶಂಕರ ಸಾರವಾಡ ಸೇರಿ ಇತರರಿದ್ದರು.