ತೀವ್ರ ಪೈಪೋಟಿಯಿಂದ ಕೂಡಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಗಮನಾರ್ಹ ಗೆಲುವು ಸಾಧಿಸಿದೆ. ಒಟ್ಟು 31 ಸ್ಥಾನಗಳನ್ನು ಹೊಂದಿರುವ ಮುಧೋಳ ನಗರಸಭೆಗೆ ನಡೆದ ಚುನಾವಣೆಯಲ್ಲಿ ಗೆಲ್ಲಲು ಮ್ಯಾಜಿಕ್ ಸಂಖ್ಯೆ 17 ಬೇಕಾಗಿತ್ತು.
ಶಾಸಕ, ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದ ಕಾಂಗ್ರೆಸ್ ಪಕ್ಷವು 14 ಸದಸ್ಯರನ್ನು ಹೊಂದಿದ್ದು, ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಕಾಂಗ್ರೆಸ್ ನ 3 ಸದಸ್ಯರನ್ನು ತನ್ನತ್ತ ಸೆಳೆದದ್ದು, ಕಾಂಗ್ರೆಸ್‌ಗೆ ಆತಂಕದ ಸ್ಥಿತಿ ತಂದೊಡ್ಡಿತ್ತು. ಆದರೂ ಆರ್.ಬಿ.ತಿಮ್ಮಾಪೂರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವೂ ತಂತ್ರಗಾರಿಕೆ ನಡೆಸಿ, ಆಪರೇಷನ್ ಹಸ್ತ ಮಾಡುವ ಮೂಲಕ ಬಿಜೆಪಿಯ 4 ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆ ಮೂಲಕ ಬಿಜೆಪಿಗೆ ತಿರುಗೇಟು ನೀಡಿ 1 ಪಕ್ಷೇತರ ಸದಸ್ಯರ ಬೆಂಬಲ ಗಳಿಸುವ ಮೂಲಕ ಮ್ಯಾಜಿಕ್ ಸಂಖ್ಯೆ 17 ತಲುಪುವಲ್ಲಿ ಯಶಸ್ವಿಯಾಯಿತು. ಈ ತಂತ್ರಗಾರಿಕೆಯ ಫಲವಾಗಿ ಬಿಜೆಪಿ 16 ಸ್ಥಾನ ತಲುಪಿ 1 ಸ್ಥಾನದ ಅಂತರದಿಂದ ಸೋಲು ಅನುಭವಿಸುವಂತಾಯಿತು.

ಮುಧೋಳ ನಗರಸಭೆಗೆ ಕಾಂಗ್ರೆಸ್ ಪಕ್ಷದ ಸುನಂದಾ ಹನಮಂತ ತೇಲಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಸ್ವತಂತ್ರ ಅಭ್ಯರ್ಥಿ ಮೆಹಬೂಬ ಸಾಬ್ ಬಾಗವಾನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರಾಗಿರುವ ಆರ್.ಬಿ.ತಿಮ್ಮಾಪೂರ ಅವರ ತವರು ಕ್ಷೇತ್ರವಾಗಿದ್ದರಿಂದ ಈ ಗೆಲುವು ತುಂಬಾ ಮಹತ್ವ ಪಡೆದುಕೊಂಡಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಇಬ್ಬರು ಶಾಸಕರಿದ್ದರೂ ದುರಸ್ತಿ ಕಾಣದ ಹಾಗರಗಾ ಮುಖ್ಯ ಹೆದ್ದಾರಿ; ಸ್ಥಳೀಯರಿಂದ ಹಿಡಿಶಾಪ
ಮುಧೋಳ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ ತುಂಬಾ ಮಹತ್ವ ಕಂಡುಕೊಂಡಿದೆ. ಚುನಾವಣೆಯಲ್ಲಿ ಎರಡೂ ಪಕ್ಷಗಳು ಸ್ಪರ್ಧಿಸಿದ್ದು, ಅತ್ಯಂತ ನಿಕಟ ಸಂಖ್ಯೆಯ ಬಲ ಹೊಂದಿದ್ದರೂ ಕೆಲ ಕಾಂಗ್ರೆಸ್ ಪಕ್ಷದ ನಾಯಕರು ಸಚಿವ ತಿಮ್ಮಾಪೂರ ಅವರಿಗೆ ಮುಖಭಂಗ ಮಾಡಲು ಬಿಜೆಪಿ ಜೊತೆ ಕೈ ಜೋಡಿಸಿದ್ದರು. ಜಿದ್ದಾಜಿದ್ದಿಗೆ ಬಿದ್ದು ಅಂತಿಮವಾಗಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯಿಂದ ಅಂತಿಮವಾಗಿ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಸಚಿವ ಆರ್.ಬಿ.ತಿಮ್ಮಾಪೂರ, ಸಹಕರಿಸಿದ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಮುಖಂಡ ಸಂಜಯ ತಳೇವಾಡ ಹಾಗೂ ಅವಿರತವಾಗಿ ಶ್ರಮಿಸಿದ ಇನ್ನಿತರ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.
