ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ನಲಿ-ಕಲಿ ವಿಭಾಗ ಸಂಪರ್ಕ ಅನುಷ್ಠಾನಗೊಂಡಿದೆ. ಗ್ರಾಮೀಣ ಮಕ್ಕಳ ಕಲಿಕಾ ಪ್ರಗತಿಯು ಗಮನಾರ್ಹವಾಗಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಪದ ಅಧಿಕಾರಿಗಳು ಹಾಗೂ ಇಲ್ಲಿನ ಶಿಕ್ಷಕರು ನಲಿ-ಕಲಿ ವಿಭಾಗವನ್ನು ವಿಶಿಷ್ಟವಾಗಿ ಹಣಿಗೊಳಿಸಿದ್ದಾರೆ. ಅಕ್ಷರ ಚಪ್ಪರ, ಮೈಲಿಗಲ್ಲು ಚೀಲ, ಪ್ರಗತಿ ದಾಖಲೆಯ ಕಲಿಕಾ ಸ್ಟಾಂಡ್, ಗೋಡೆ ಬರಹ ಎಲ್ಲವೂ ವಿಭಿನ್ನವಾಗಿವೆ. ಸರಳ ಕಲಿಕೆಗೆ ನೇರ ವಾಗುವಂತೆ ಕನ್ನಡ, ಇಂಗ್ಲೀಷ್ ವರ್ಣಮಾಲೆ, ಮಗ್ಗಿಗಳನ್ನು ಬಣ್ಣದಿಂದ ಬರೆದು ವಿಷಯವಾರು ಕಲಿಕಾ ಸಾಮಗ್ರಿಗಳನ್ನು ಜೋಡಿಸಿದ್ದಾರೆ. ಮಕ್ಕಳ ಕುತೂಹಲ ಕೆರಳಿಸುವ ಗಣಿತ ವಿಜ್ಞಾನದ ಸರಳ ಪ್ರಯೋಗಗಳ ಮೂಲಕ ಇಲ್ಲಿ ಕಲಿಕೆಗೆ ಪ್ರೇರೇಪಿಸಲಾಗುತ್ತಿದೆ.
ಈ ಶಾಲೆಯ ಶಿಸ್ತು ಖಾಸಗಿ ಶಾಲೆಯನ್ನೂ ಮೀರಿಸುವಂತಿದೆ. ಎಲ್ಲ ಮಕ್ಕಳು ಕಡ್ಡಾಯವಾಗಿ ಸಮವಸ್ತ್ರ ಟೈ, ಬೆಲ್ಟ್ ಬೂಟು, ಸಾಕ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಎಲ್ಲ ಸರ್ಕಾರಿ ಶಾಲೆಗಳು ನಿಗದಿಪಡಿಸಿದ ಸಮಯಕ್ಕೆ ಆರಂಭವಾದರೆ, ಈ ಶಾಲೆ ನಿಗದಿತ ಸಮಯಕ್ಕಿಂತ ಬೇಗನೆ ತೆರೆಯುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒಂದು ಗಂಟೆ ಕಾಲ ಹಿಂದಿನ ದಿನದ ಪಾಠಗಳ ಪರಿವರ್ತನೆ ನಡೆಯುತ್ತದೆ.

ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 335 ಮಕ್ಕಳಿದ್ದು 8 ಮಂದಿ ಶಿಕ್ಷಕರಿದ್ದಾರೆ. ನಲಿ-ಕಲಿ ವಿಭಾಗದ ಜವಾಬ್ದಾರಿ ಒತ್ತಿರುವ ಶಿಕ್ಷಕಿ ಶಿವಲೀಲಾ ಔದಕ್ಕನವರ ಹಾಗೂ ವಿಜಯಲಕ್ಷ್ಮಿ ಕಟ್ಟಿಮನಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕಾ ಶಕ್ತಿ ಮೂಡಿಸುತ್ತಿದ್ದಾರೆ. ದೈಹಿಕ ಶಿಕ್ಷಕ ಬಿ ಎಸ್ ಹಿರೇಮಠ, ಮಹಾಂತೇಶ ರಣಥೋರ, ಮನೋಹರ ನದಾಫ್ ಪಟ್ಟದ ಜೊತೆಗೆ ಸ್ಪರ್ಧಾತ್ಮಕವಾಗಿಯೂ ಮಕ್ಕಳನ್ನು ಅಣಿಗೊಳಿಸುತ್ತಾರೆ. ಪ್ರತಿ ವರ್ಷ ಶಾಲೆಯ ಮೂರ್ನಾಲ್ಕು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗೆ ಆಯ್ಕೆಯಾಗುತ್ತಾರೆ.

ಇಲ್ಲಿನ ಶೈಕ್ಷಣಿಕ ಪರಿಸರವನ್ನು ಗ್ರಾಮೀಣ ಪ್ರದೇಶದ ಜನರು ಮೆಚ್ಚಿಕೊಂಡಿದ್ದಾರೆ. ಮಕ್ಕಳನ್ನು ಯಾರೂ ಕೂಡಾ ಖಾಸಗಿ ಶಾಲೆಗೆ ದಾಖಲಿಸುತ್ತಿಲ್ಲ. ಖಾನಾಪುರ, ಕಾನಿಕೇರಿ, ಸುಲ್ತಾನಾಪುರ ಗ್ರಾಮದ ಮಕ್ಕಳು ಸೇರಿದಂತೆ 4ಆಡದ ವಿವಿಧ ಖಾಸಗಿ ಶಾಲೆಯಲ್ಲಿ ಕಲಿತಿದ್ದ ಮಕ್ಕಳು ಇಲ್ಲಿ ಪ್ರವೇಶ ಪಡೆದಿರುವುದು ಈ ಸರ್ಕಾರಿ ಶಾಲೆಯ ಹೆಗ್ಗಳಿಕೆ.
ಶಾಲಾ ಪ್ರದೇಶದ ಅನೇಕ ಕುಟುಂಬಗಳು ಉದ್ಯೋಗ ಹರಸಿ ವರ್ಷದಲ್ಲಿ ಆರು ತಿಂಗಳು ಗೋವಾ, ಮಹಾರಾಷ್ಟ್ರ, ಮಂಗಳೂರಿಗೆ ವಲಸೆ ಹೋಗುತ್ತಾರೆ. ಮುಖ್ಯ ಶಿಕ್ಷಕ ಅಶೋಕ ನರಸಲಗಿ ಪಾಲಕರ ಸಭೆ ನಡೆಸಿ, ಗೊಳೆ ಕುಟುಂಬಗಳ ಮಕ್ಕಳನ್ನು ಜೊತೆಯಲ್ಲೇ ಕರೆದೊಯ್ಯುದಂತೆ ಮನವೊಲಿಸಿದ್ದಾರೆ. ಹೀಗಾಗಿ ಶಾಲೆಯ ದಾಖಲಾತಿಗೆ ಅನುಗುಣವಾಗಿ ಹಾಜರಾತಿ ಉತ್ತಮವಾಗಿದೆ.
ಇದನ್ನೂ ಓದಿದ್ದೀರಾ? ಕೋಲಾರ | ತಾಜ್ಯ ವಿಲೇವಾರಿ ಘಟಕದಲ್ಲಿ ಕಳಪೆ ಯಂತ್ರ ಅಳವಡಿಕೆ ಆರೋಪ; ತಳ್ಳಿಹಾಕಿದ ಆಯುಕ್ತ
ಎಸ್‌ಡಿಎಂಸಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಪರಿಸರ ರೂಪಿಸಿದ್ದೇವೆ. ಶಾಲೆಗೆ ಬರುವ ಬಡ ಮಕ್ಕಳಿಂದಾಗಿಯೇ ನಾವು ಸಂಬಳ ಪಡೆಯುತ್ತಿದ್ದು, ಅವರಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಅಶೋಕ ನರಸಲಗಿಯವರು.