“ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲಾದ್ಯಂತ ಎಲ್ಲ ಇರುವ ಅಧೀನ ನ್ಯಾಯಾಲಯಗಳಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ. ಭಾಗವಹಿಸುವ ಕಕ್ಷಿದಾರರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುವುದು” ಎಂದು ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ್ ಎ. ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎಡಿಆರ್ ಕಟ್ಟಡದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಎಲ್ಲ ವರ್ಗದ ಕಕ್ಷಿದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
“ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನಕ್ಕೆ ಒಳಪಡಬಹುದಾದ ವ್ಯಾಜ್ಯ ಪೂರ್ವ ಪ್ರಕರಣಗಳು, ರಾಜಿ ಅಮಾನ್ಯದ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ರಾಜಿಯಾಗಬಲ್ಲ ೨ ಅಪರಾಧಿಕ ಪ್ರಕರಣಗಳು, ವೈವಾಹಿಕ ಮತ್ತು ರಾಜಿಯಾಗಬಲ್ಲ ಸಿವಿಲ್ ಹಾಗೂ ಇತರೆ ಸಂಧಾನದ ಕ್ಷ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ” ಎಂದು ಹೇಳಿದರು.

“ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಆ.1ಕ್ಕೆ 46,446 ಸಿವಿಲ್ ಹಾಗೂ 25,044 ಕ್ರಿಮಿನಲ್ ಒಳಗೊಂಡಂತೆ ಒಟ್ಟು 71,490 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈಗಾಗಲೇ 2,334 ಸಿವಿಲ್ ಹಾಗೂ 979 ಕ್ರಿಮಿನಲ್ ಸೇರಿದಂತೆ ಒಟ್ಟು 3,313 ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ. ಸಂಬಂಧಿಸಿದ ವಕೀಲರು ಹಾಗೂ ಕಕ್ಷಿದಾರರೊಂದಿಗೆ ಮಾತುಕತೆ ಮೂಲಕ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಸಹ ರಾಜಿಗಾಗಿ ಗುರುತಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ರಾಷ್ಟೀಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ವಿಶೇಷ ಮಧ್ಯಸ್ಥಿಕೆ ಅಭಿಯಾನದ ಅಡಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ವಿಶೇಷ ಮಧ್ಯಸ್ಥಿಕೆ ಅಭಿಯಾನ ಅ.7ರ ತನಕ ನಡೆಯಲಿದೆ” ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ತಿಳಿಸಿದರು.
“ಅಭಿಯಾನದಲ್ಲಿ ಭಾಗವಹಿಸಿ ಕಕ್ಷಿದಾರರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕೆ ಅವಕಾಶವಿದೆ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಈವರೆಗೆ ಒಟ್ಟು 1,527 ಪ್ರಕರಣಗಳನ್ನು ಇತ್ಯರ್ಥಕ್ಕಾಗಿ ಗುರುತಿಸಲಾಗಿದೆ. ಇವುಗಳಲ್ಲಿ 123 ಪ್ರಕರಣಗಳು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲಾಗಿದೆ. 17 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಕ್ಕಾಗಿ ಗುರುತಿಸಲಾಗುವುದು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಿಂದ 1.68 ಕೋಟಿ ನಗದು, 6 ಕೆಜಿ ಚಿನ್ನ ವಶಕ್ಕೆ ಪಡೆದ ಇ.ಡಿ
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್ ಹಾಗರಿಗಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಡಿಜಿ ಬಿರಾದಾರ, ಪ್ರಧಾನ ಕಾರ್ಯದರ್ಶಿ ಎಸ್ ಎಸ್ ಚೂರಿ ಇದ್ದರು.
