“ಎನ್ಎಸ್ಎಸ್ ಎಂಬುದು ಮನುಷ್ಯನಲ್ಲಿ ಸಹನೆ, ತಾಳ್ಮೆ ಹಾಗೂ ಶಿಸ್ತಿನ ಜೊತೆಗೆ ಧೈರ್ಯವನ್ನು ಸಹ ಹೆಚ್ಚು ಮಾಡುತ್ತದೆ. ಎನ್ಎಸ್‌ಎಸ್ ಸ್ವಯಂ ಸೇವಕರು ಯಾವುದೇ ಕಷ್ಟಕರ ಸನ್ನಿವೇಶವನ್ನೂ ಸಹ ಎದುರಿಸುವಂತಹ ಶಕ್ತಿ ಹೊಂದಿರುತ್ತಾರೆ” ಎಂದು ರಾಜ್ಯ ಎನ್‌ಎಸ್ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ತಿಳಿಸಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾಗಳು ಹಾಗೂ ಸ್ವಯಂ ಸೇವಕಿಯರ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಎನ್‌ಎಸ್‌ಎಸ್ ಅಧಿಕಾರಿಗಳ ಹಾಗೂ ಪ್ರಾಂಶುಪಾಲರ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
“ಎನ್‌ಎಸ್‌ಎಸ್ ಒಬ್ಬ ಮನುಷ್ಯನನ್ನು ಹೇಗೆ ಸಕಾರಾತ್ಮಕವಾಗಿ ಬದಲಾವಣೆ ಮಾಡುತ್ತದೆ. ಹಾಗೇ ಒಬ್ಬ ವ್ಯಕ್ತಿ ಒಂದು ಬಾರಿಯಾದರೂ ಎನ್‌ಎಸ್‌ಎಸ್ ಕಾರ್ಯಕರ್ತನಾಗಿದ್ದರೆ ಆತ ತನ್ನ ಜೀವನದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಲಾರ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಎನ್‌ಎಸ್‌ಎಸ್‌ನ ಕಾರ್ಯಕ್ರಮಾಧಿಕಾರಿಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿರಬೇಕು. ತಮಗಿರುವ ಹಲವು ಜವಾಬ್ದಾರಿಗಳ ಜೊತೆಗೆ ಎನ್‌ಎಸ್‌ಎಸ್‌ನ ಕೆಲಸ ಕಾರ್ಯಗಳಿಗೂ ಸಹಾ ಅಷ್ಟೇ ಮನ್ನಣೆಯನ್ನ ನೀಡಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶನಾಲಯದ ಉಪ ನಿರ್ದೇಶಕರಾದ ಯಲ್ಲಪ ಉಪ್ಪಿನ ಹಾಗೂ ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರಾದ ಡಾ. ಕಾರ್ತೀಗೇನ್ ಇವರು ಎನ್‌ಎಸ್ಎಸ್ ಅಧಿಕಾರಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂಚಂದ್ರಶೇಖರ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ, ಪ್ರೊ.ಶಾಂತಾದೇವಿ ಟಿ. ಉಪಸ್ಥಿತರಿದ್ದರು. ವಿವಿಧ ಕಾಲೇಜಿನ ಎನ್‌ಎಸ್ಎಸ್ ಅಧಿಕಾರಿಗಳು, ಪ್ರಾಂಶುಪಾಲರು, ಎನ್‌ಎಸ್ಎಸ್ ಸ್ವಯಂ ಸೇವಕಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಡಾ.ಕಲಾವತಿ ಕಾಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
