ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಪೂರ್ವ ನಿಯೋಜಿತವಾಗಿರುವಂತೆ ಕಾಣುತ್ತಿದೆ. ಎರಡು ಸಾವಿರಕ್ಕೂ ಅಧಿಕ ಪ್ರವಾಸಿಗರು ಆ ತಾಣದಲ್ಲಿ ಇದ್ದರೂ ಸ್ಥಳೀಯ ಪೊಲೀಸರಾಗಲಿ, ಭದ್ರತಾ ಪಡೆಗಳು ರಕ್ಷಣೆಗೆ ಇರಲಿಲ್ಲ. ದೇಶದ ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ ಆರೋಪಿಸಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದಲ್ಲಿ 11 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೂ ಇದುವರೆಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. 2019 ಪುಲ್ವಾಮಾದಲ್ಲಿ ಸೈನಿಕರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿ ಬಗ್ಗೆ ಇದುವರೆಗೆ ಕೇಂದ್ರ ಸರ್ಕಾರ ಯಾವ ತನಿಖೆ ನಡೆಸಿಲ್ಲ, ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಪುಲ್ವಾಮಾ ದಾಳಿಕೋರರ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದರೆ ಇಂದು ಪಹಲ್ಗಾಮ್ ದುರಂತ ಸಂಭವಿಸುತ್ತಿರಲಿಲ್ಲ” ಎಂದರು.
“ಪ್ರಧಾನಿ ನರೇಂದ್ರ ಮೋದಿ ಏ.22ರಂದು ಪಹಲ್ಗಾಮ್‌ಗೆ ಭೇಟಿ ನೀಡುವ ಪೂರ್ವನಿಯೋಜಿತ ಕಾರ್ಯಕ್ರಮ ಇತ್ತು. ಆದರೆ, ಅದನ್ನು ಬಿಟ್ಟು ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ್ದರು. ಏತಕ್ಕಾಗಿ ಪ್ರಧಾನಿ ಪಹಲ್ಗಾಮ್ ಭೇಟಿ ರದ್ದುಗೊಳಿಸಿದ್ದರು ಎಂಬುದು ಬಹಿರಂಗವಾಗಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ನರ್ಸಿಂಗ್ ವಿದ್ಯಾರ್ಥಿಗಳಿಂದ ಹಣ ವಸೂಲಿ; ಕ್ರಮಕ್ಕೆ ಒತ್ತಾಯ
ಪತ್ರಿಕಾ ಗೋಷ್ಠಿಯಲ್ಲಿ ಡಾ. ರವಿ ಬಿರಾದಾರ, ಎಂ ಸಿ ಮುಲ್ಲಾ ಹಾಗೂ ನಾಗರಾಜ ಲಂಬು ಇದ್ದರು.