ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರಿ ಇಲಾಖೆಯೊಂದಿಗೆ ದೌರ್ಜನ್ಯ ತಡೆ ಸಮಿತಿಯೂ ಇದೆ. ಅಧ್ಯಕ್ಷರು ಹಾಗೂ ಸೌಜನ್ಯ ಸಮಿತಿಯ ಎಲ್ಲ ಪದಾಧಿಕಾರಿಗಳು ನಮ್ಮೊಂದಿಗೆ ಸಹಕರಿಸಬೇಕು, ದೌರ್ಜನ್ಯ ನಿಯಂತ್ರಣ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಅನುರಾಧ ವಸ್ತ್ರದ ತಿಳಿಸಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಮಿನಿ ಆಡಳಿತಸೌಧ ಸಭಾ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮೇಲ್ಪಂಕ್ತಿಗೆ ಬರಬೇಕು. ಗ್ರಾಮೀಣ ಭಾಗಗಳಲ್ಲಿ ಸಮಸ್ಯೆಗಳಿದ್ದರೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೌರ್ಜನ್ಯ ಸಮಿತಿ ಅಧ್ಯಕ್ಷ ಬಾಬು ಗುಡಮಿ ಮಾತನಾಡಿ, “ಎಸ್‌ಸಿ/ಎಸ್‌ಟಿ ಕುಂದು ಕೊರತೆ ಸಾಕಷ್ಟು ಇವೆ. ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ಅಧಿಕಾರಿಗಳು ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಲು ವಿನಂತಿಸಿದ್ದಾರೆ. ಅಥರ್ಗಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಇಲ್ಲ. ಇದನ್ನು ಕೂಡಲೇ ಮಂಜೂರು ಮಾಡಬೇಕು” ಎಂದು ವಿನಂತಿಸಿದರು.
ಇದನ್ನೂ ಓದಿದ್ದೀರಾ? ಮೇ ಅಂತ್ಯದವರೆಗೆ ಬೆಂಬಲ ಬೆಲೆ ತೊಗರಿ ಖರೀದಿ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ
ಸಭೆಯಲ್ಲಿ ಹಲವು ಸಮಸ್ಯೆಗಳನ್ನು ಸಮಿತಿ ಪದಾಧಿಕಾರಿಗಳು ಪ್ರಸ್ತಾಪಿಸಿದರು. ಅವುಗಳಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಉತ್ತರಿಸಿದರು.
ಈ ವೇಳೆ ಶಿವಾನಂದ ಮೂರುಮನ್, ತಶೀಲ್ದಾರ್ ಬಿ ಎಸ್ ಕಡಕಬಾವಿ, ತಾಪಂ ಇಒ ನಂದೀಪ್ ರಾಠೋಡ, ಡಿವೈಎಸ್‌ಪಿ ಜಗದೀಶ್ ಎಸ್ ಎಚ್, ಸಮಾಜ ಕಲ್ಯಾಣ ತಾಲೂಕು ಅಧಿಕಾರಿ ಉಮೇಶ್ ಲಮಾಣಿ ಸೇರಿದಂತೆ ಇತರರು ಇದ್ದರು.