ಅಲಮೇಲ ತಾಲೂಕಿನ ಆಹೇರಿ ಗ್ರಾಮದ ಅನ್ನಭಾಗ್ಯ ದಿನಸಿ ವಿತರಕ ಗ್ರಾಹಕರಿಗೆ 2-3 ತಿಂಗಳಿಂದ ರೇಷನ್ ಕೊಡದೆ ಸತಾಯಿಸಿ, ಪ್ರಶ್ನಿಸಿದರೆ ಪಡಿತರ ಚೀಟಿ ರದ್ದುಗೊಳಿಸುವುದಾಗಿ ಹೆದರಿಸುತ್ತಾರೆ. ಅಂತಹ ಅನ್ನಭಾಗ್ಯ ವಿತರಕರ ಲೈಸೆನ್ಸ್ ರದ್ದುಗೊಳಿಸುವಂತೆ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಅಲಮೇಲ ತಾಲೂಕು ಆಹೇರಿ ಗ್ರಾಮದ ನ್ಯಾಯಬೆಲೆ ಅಂಗಡಿಯ ದಿನಸಿ ಹಂಚುವ ವಿತರಕ ತಿಂಗಳ ದಿನಸಿ ಕೊಡದೆ 2-3 ತಿಂಗಳು ಮುಂದೂಡುತ್ತಿದ್ದು, ಜನರು ಪ್ರಶ್ನಿಸಿದರೆ ಪಡಿತರ ಚೀಟಿ ರದ್ದುಗೊಳಿಸುವುದಾಗಿ ಎದುರಿಸಿದ ವಿತರಕರ ಲೈಸನ್ಸ್ ರದ್ದು ಮಾಡುವಂತೆ ರೈತ ಸಂಘಟಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಅವರಿಗೆ ಒತ್ತಾಯಿಸಿದರು.
ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ಆಹೇರಿ(ಜ) ಗ್ರಾಮದ ದಿನಸಿ ಹಂಚುವ ವಿತರಕರು ಫಲಾನುಭವಿಗಳಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಮುಂದಿನ ತಿಂಗಳು ಬನ್ನಿ ಎಂದು 2 ತಿಂಗಳಿಂದ ದಿನಸಿ ಕೊಡದೇ ಮುಂದೂಡುತ್ತಿದ್ದಾರೆ. ಹೆಚ್ಚಿಗೆ ಕೇಳಿದರೆ ನಿಮ್ಮ ರೇಷನ್ ಕಾರ್ಡ್ ರದ್ದು ಪಡಿಸುವುದಾಗಿ ಹೆದರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ರೈತ ಸಂಘದ ಅಧ್ಯಕ್ಷ ಆತ್ಮಾನಂದ ಭೈರೋಡಗಿ ಮಾತನಾಡಿ, ಈ ವಿತರಕರು ಪ್ರತಿ ತಿಂಗಳು 100 ಜನರಿಗೆ ರೇಷನ್ ಖಾಲಿ ಆಗಿದೆ, ಮೇಲಿನಿಂದಲೇ ಕಡಿಮೆ ಕಳುಹಿಸಿದ್ದಾರೆ, ಮುಂದಿನ ತಿಂಗಳು ಬನ್ನಿ ಎಂದು ಕಳುಹಿಸುತ್ತಿದ್ದಾರೆ. ಪ್ರಶ್ನಿಸಿದವರಿಗೆ ರೇಷನ್ ಕೊಡುವುದಿಲ್ಲ ಎಂದರು.
ಮನವಿ ಸ್ವೀಕರಿಸಿದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಮಾತನಾಡಿ, ಹೆಬ್ಬೆಟ್ಟು ಒತ್ತಿಸಿಕೊಂಡು 2-3 ತಿಂಗಳ ನಂತರ ದಿನಸಿ ಕೊಡುವ ಯಾವುದೇ ಪದ್ದತಿ ಇಲ್ಲ, ಹೆಬ್ಬೆಟ್ಟು ಒತ್ತಿಸಿಕೊಂಡ ತಕ್ಷಣದಲ್ಲಿ ದಿನಸಿ ವಿತರಣೆ ಮಾಡಬೇಕು. ಸಾರ್ವಜನಿಕರು ಇಂತಹ ಕಡೆಗೆ ಅನ್ಯಾಯವಾದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಈ ಕೂಡಲೇ ತನಿಖಾ ತಂಡ ರಚಿಸಿ ತಪ್ಪು ಜರುಗಿದ್ದರೆ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ಕೊಡುತ್ತೇವೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ತಾಲೂಕಾ ಸಮೂಹ ಮಾಧ್ಯಮ ಪ್ರತಿನಿಧಿ ಜಯಸಿಂಗ ರಜಪೂತ, ಅರವಿಂದ ರಜಪೂತ, ತಿಪ್ಪರಾಯ ಭೈರೊಡಗಿ, ಚನ್ನವೀರ ವಾಲಿ ಇದ್ದರು.