ಎಸ್ಡಿಎಂಸಿ ಅನ್ನುವುದು ಅಧಿಕಾರವಲ್ಲ ಅದೊಂದು ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಸಮರ್ಥ ರೀತಿಯಲ್ಲಿ ಪಾಲಿಸಿದರೆ ಸರ್ಕಾರಿ ಶಾಲೆಗಳನ್ನು ಸುಧಾರಿಸಬಹುದು. ಜೊತೆಗೆ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಫಲತೆ ಕಂಡುಕೊಳ್ಳಬಹುದು ಎಂದು ನಿವೃತ್ತ ಶಿಕ್ಷಣ ಇಲಾಖೆ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಜಿ ಡಿ ಕೊಟ್ನಾಳ ಹೇಳಿದರು.
ಜಿಲ್ಲೆಯ ನವಚೇತನ ಸಭಾಂಗಣದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯ ಸಮಿತಿ(ಎಸ್ಡಿಎಂಸಿ) ಸಹಯೋಗದಲ್ಲಿ ಎಸ್ಡಿಎಂಸಿ ಸದಸ್ಯರಿಗೆ ಶಾಲಾ ಅಭಿವೃದ್ಧಿ ಮತ್ತು ಶಿಕ್ಷಣ ಗುಣಮಟ್ಟ ಸುಧಾರಣೆ ಕ್ರಮಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಪಾಲಕ-ಪೋಷಕರ ಮಧ್ಯೆ ಹೊಂದಾಣಿಕೆ ಇದ್ದರೆ ಮಾತ್ರ ಶಾಲೆಯೊಂದನ್ನು ಮಾದರಿಯನ್ನಾಗಿ ರೂಪಿಸಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮುಂದೆ ಸಾಗಿಬೇಕು” ಸಲಹೆ ನೀಡಿದರು.
ಪತ್ರಕರ್ತ ಡಿ ಜಿ ಕುಪಸ್ತ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯ ಏಳಿಗೆಯಲ್ಲಿ ಶಿಕ್ಷಕ, ಪಾಲಕ, ಬಾಲಕ ಮೂವರ ಪಾತ್ರ ತುಂಬಾ ಪ್ರಮುಖವಾಗಿದೆ. ಮೂರರಲ್ಲಿ ಒಂದು ಕೊರತೆಯಾದರೂ ಶಾಲಾ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತದೆ. ಆದ್ದರಿಂದ ಮೂವರು ಹೊಂದಾಣಿಕೆಯಿಂದ ಸಾಗಬೇಕೆಂದು ತಿಳಿಸಿದರು.
ಉಪನ್ಯಾಕರಾಗಿ ಆಗಮಿಸಿದ್ದ ಮೊಯಿದ್ದೀನ್ ಕುಟ್ ಮಾತನಾಡಿ, ಎಸ್ಡಿಎಂಸಿ ರಚನೆ, ಸದಸ್ಯರ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜೊತೆಗೆ ಶಾಲೆಯಲ್ಲಿ ಮಕ್ಕಳ ಸುರಕ್ಷಾ ಸಮಿತಿ ರಚನೆ ಮಾಡುವ ಕುರಿತು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಾಚಾದೊ ಮಾತನಾಡಿ, ಶಾಲೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಕರ್ನಾಟಕ ಉತ್ತರ ಭಾಗದಲ್ಲಿ ಶಾಲಾ ಅಭಿವೃದ್ಧಿಯ ಕಾರ್ಯನಡೆಯು ಭಿನ್ನವಾಗಿದೆ. ಬೇರೆ ಭಾಗಗಳಲ್ಲಿ ಎಸ್ಡಿಎಂಸಿ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸುತ್ತಿದ್ದಾರೆ. ಅದರಂತೆ ಉತ್ತರ ಭಾಗದಲ್ಲಿಯೂ ಸಹ ಶಾಲೆಗಳ ಅಭಿವೃದ್ಧಿಗೆ ನಾವೆಲ್ಲರು ಕೈಜೋಡಿಸೋಣವೆಂದುರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಕೂಲಿ ಕಾರ್ಮಿಕರ ಮೇಲೆ ಹಲ್ಲೆ; ಕಾಂಗ್ರೆಸ್ ಎಸ್ಸಿ ಘಟಕ ಖಂಡನೆ
ಬಳಿಕ ಜಿಲ್ಲಾ ಮಟ್ಟದ 18 ಜನರನ್ನು ಒಳಗೊಂಡ ಎಸ್ಡಿಎಂಸಿ ಸಮನ್ವಯ ಸಮಿತಿ ರಚನೆ ಮಾಡಲಾಯಿತು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
