ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರ ದಾಳಿಯ ಮಾಹಿತಿಯನ್ನರಿತು ತಪ್ಪಿಸಿಕೊಳ್ಳಲು ನದಿಗೆ ಜಿಗಿದಿದ್ದು, ಆರು ಜನ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಪೊಲೀಸರು ಬರುತ್ತಿದ್ದಾರೆ ಎಂದು ಮಾಹಿತಿ ಸಿಕ್ಕ ಬೆನ್ನಲ್ಲೇ ಭಯದಿಂದ ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದೆ. ಆದರೆ, ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನದಿಯಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ಆರು ಜನರು ಜಲಸಮಾಧಿಯಾಗಿರುವುದಾಗಿ ವರದಿಯಾಗಿದೆ.
ಕೃಷ್ಣಾ ನದಿ ತಟದಲ್ಲಿ ಗುಂಪೊಂದು ಇಸ್ಪೀಟ್ ಆಟವಾಡುತ್ತಿತ್ತು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ನದಿಯ ನಡುಗಡ್ಡೆಯತ್ತ ಹೊರಟ್ಟಿದ್ದಾರೆ. ಆದರೆ, ದುರದೃಷ್ಟವಶಾತ್ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನಡು ನದಿಯಲ್ಲೇ ಮಗುಚಿ ಬಿದ್ದಿರುವುದಾಗಿ ತಿಳಿದುಬಂದಿದೆ. ಈಜು ಬಾರದೇ ನೀರಿನಲ್ಲಿ ಮುಳುಗಿ, ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಕೊಲ್ಹಾರ ಪಟ್ಟಣ ನಿವಾಸಿಗಳಾದ ಮೆಹಬೂಬ್ ವಾಲೀಕಾರ(30), ತಯ್ಯಬ್ ಚೌಧರಿ(30), ರಫೀಕ್ ಜಾಲಗಾರ(55), ಪುಂಡಲಿಕ ಮಲ್ಲಪ್ಪ ಯಂಕಂಚಿ(34), ದಶರಥ ಗೌಡರ ಸೂಳಿಬಾವಿ(66) ಎಂದು ತಿಳಿದುಬಂದಿದ್ದು, ಮತ್ತೋರ್ವನ ವಿವರ ತಿಳಿದುಬಂದಿಲ್ಲ. ಪುಂಡಲಿಕ ಯಂಕಂಚಿ(34) ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದ್ದು, ಉಳಿದವರ ಶೋಧ ಕಾರ್ಯ ಮುಂದುವರಿದಿದೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ನಾಡ ಬಾಂಬ್ ಸ್ಫೋಟ; ಅಪಾಯದಿಂದ ಪಾರಾದ ಕಾರಿನಲ್ಲಿದ್ದ ಪತ್ರಕರ್ತರು
ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದು, ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋವಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾರ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
