ವಿದ್ಯಾರ್ಥಿ, ಯುವಜನರ ಹಕ್ಕುಗಳಿಗಾಗಿ ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯಮಟ್ಟದ ಸಮ್ಮೇಳನ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ಫೆಬ್ರವರಿ 18ರಂದು ನಡೆಯಲಿದೆ ಎಂದು ವಿಜಯಪುರ ಜಿಲ್ಲಾ ಪರಿಷತ್‌ನ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ ತಿಳಿಸಿದ್ದಾರೆ.
“ದಲಿತ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿತು ರಾಜ್ಯಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸುತ್ತ ಬಂದಿದೆ. ಕಳೆದ ವರ್ಷವೂ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನ ಕೊಡಲಾಗುತ್ತದೆ.
ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ಬಹುಮಾನ ₹2.50 ಲಕ್ಷ, ತೃತೀಯ ಬಹುಮಾನ ₹1 ಲಕ್ಷ ಮತ್ತು ಪ್ರತಿ ಜಿಲ್ಲಾ ಮಟ್ಟದಲ್ಲಿ ರ‍್ಯಾಂಕ್ ಬಂದವರಿಗೆ ₹15,000 ಬಹುಮಾನವನ್ನು ಪರಿಷತ್ತಿನಿಂದ ಕೊಡಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಥಿಗಳಿಂದ ವಾರದ ಸಂತೆ, ಚೌಕಾಸಿ ಮಾಡಿ ಖರೀದಿಸಿದ ಗ್ರಾಹಕರು
“ದಲಿತ ವಿದ್ಯಾರ್ಥಿ ಪರಿಷತ್‌ನ 15ನೇ ರಾಜ್ಯಮಟ್ಟದ ಸಮ್ಮೇಳನ ಕೂಡ ನಡೆಯುತ್ತಿದೆ. ಈ ಸಮ್ಮೇಳನದ ಉದ್ಘಾಟಕರಾಗಿ ಸಚಿವ ಪ್ರಿಯಾಂಕ ಖರ್ಗೆ ಅವರು ಭಾಗವಹಿಸಲಿದ್ದಾರೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.