ಜಿಲ್ಲೆಯ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಸಲು ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಕಡಲೆಕಾಳು ಖರೀದಿಸಲು ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಅನ್ವಯ ರೈತರ ಹೆಸರು ನೋಂದಣಿ ಆದೇಶ ದಿನಾಂಕದಿಂದ 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಯಿತು. ಪ್ರತಿ ಕ್ವಿಂಟಾಲ್ ಕಡಲೆಕಾಳನ್ನು ₹5,650ರಂತೆ, ಪ್ರತಿ ರೈತರಿಂದ ಪ್ರತಿ ಎಕರೆಗೆ ಕನಿಷ್ಠ 4 ಕ್ವಿಂಟಾಲ್‌ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಕಡಲೆಕಾಳನ್ನು ಖರೀದಿಸಲು ಸಭೆ ನಿರ್ಧರಿಸಿತು.
ಕಡಲೆಕಾಳು ಖರೀದಿ ನಂತರ ರೈತರ ಖಾತೆಗೆ ರಾಜ್ಯ ಸರ್ಕಾರದ ಡಿಬಿಟಿ ಮೂಲಕ ಖರೀದಿ ಮೊತ್ತವನ್ನು ಪಾವತಿಸಲು ಕ್ರಮವಹಿಸಬೇಕು. ರೈತರು ಕಡಲೆಕಾಳು ಖರೀದಿ ಕೇಂದ್ರಕ್ಕೆ ತಂದು ತೂಕ ಮಾಡಿಸಿಕೊಂಡು ಅಧಿಕೃತ ರಸೀದಿ ಪಡೆದುಕೊಳ್ಳಬೇಕು. ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ ಖರೀದಿ ಕೇಂದ್ರಕ್ಕೆ ಖುದ್ದು ರೈತರೇ ಕಡಲೆಕಾಳು ತರಬೇಕು. ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆಕಾಳು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಎಚ್‌ಐವಿ ಸೋಂಕಿನ ಕುರಿತು ಯುವಕರಲ್ಲಿ ಜಾಗೃತಿ ಅಗತ್ಯ: ಬಾಬುರಾವ ತಳವಾರ
