ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಕುಡಿಯುವುದಕ್ಕೆ ಶುದ್ದ ನೀರು, ಕುಳಿತುಕೊಳ್ಳುವುದಕ್ಕೆ ಆಸನಗಳು, ಸ್ವಚ್ಚತೆಯ ವಾತಾವರಣ ಇರಬೇಕು. ಆದರೆ ಇದ್ಯಾವುವೂ ಸಿಂದಗಿ ಬಸ್ ನಿಲ್ದಾಣದಲ್ಲಿ ಇಲ್ಲ. ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯ ವಿಜಯಪುರ ಜಿಲ್ಲೆಯಿಂದ ಕಲಬುರಗಿಗೆ ಹೋಗುವ ಪ್ರಯಾಣಿಕರಿಗೆ ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ. ಮುರಿದು ಹೋದ ಆಸನಗಳು, ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆದ ತ್ಯಾಜ್ಯ ವಸ್ತುಗಳು, ಸ್ವಚ್ಛತೆ ಕೊರತೆ, ಕುಡಿಯುವ ನೀರಿನ ಅವ್ಯವಸ್ಥೆ, ಗಬ್ಬು ನಾರುತ್ತಿರುವ ಶೌಚಾಲಯ, ಆಸನಗಳಿಲ್ಲದೆ ಮಹಿಳೆಯರು, ಹಿರಿಯರು, ವಿದ್ಯಾರ್ಥಿಗಳು ನಿಂತುಕೊಂಡೆ ಗಬ್ಬುನಾತ ಸೇವಿಸುತ್ತಾ ಬಸ್ಸಿಗಾಗಿ ಕಾಯುವುದು ಅನಿವಾರ್ಯವಾಗಿದೆ.
ಬಸ್ ನಿಲ್ದಾನದ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳ ಸೂಸಾಟ
ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಎಸೆದಿರುವ ಕಸ, ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಎಸೆಯಲಾಗಿದ್ದು, ಎಲೆ ಅಡಿಕೆ ಉಗಿದು ಅನೈರ್ಮಲ್ಯ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಬಸ್ಸಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದಲ್ಲಿ ಕುಡಿಯಲು ಅರ್ಹವಾದ ನೀರು ಕೂಡ ಇಲ್ಲ
ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ನೀರಿನ ಅರವಟಿಗೆ ಇದ್ದರೂ ನೀರು ಕುಡಿಯಲಾಗದಂತಹ ಪರಿಸ್ಥಿತಿ ಇದೆ. ಯಾಕೆಂದರೆ, ನೀರು ಕುಡಿಯಲು ಅನರ್ಹವಾಗಿದೆ. ಅರವಟಿಗೆಯಲ್ಲಿ ಕಸ ಬಿದ್ದು ನೀರು ಸರಳವಾಗಿ ಹೋಗುವ ಪೈಪ್ ಒಡೆದು ಬಸ್ ನಿಲ್ದಾಣದಲ್ಲಿ ಹರಿಯುತ್ತಿದೆ.

ಬಸ್ ನಿಲ್ದಾಣದಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಪ್ರಯಾಣಿಕರು ಜಾರಿ ಬೀಳುವ ಭೀತಿಯಲ್ಲಿಯೇ ನಡೆದಾಡುವ ಪರಿಸ್ಥಿತಿ ಉಂಟಾಗಿದೆ. ಅಷ್ಟೇ ಅಲ್ಲದೆ ಬಸ್ ನಿಲ್ದಾಣದಲ್ಲಿ ಇರುವ ಹೋಟೆಲ್ ಹಿಂಭಾಗದ ನೀರಿನ ಪೈಪ್ ಒಡೆದು ನೀರು ಬಸ್ ನಿಲ್ದಾಣದಲ್ಲಿ ಹರಿದು ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲ
ಸಿಂದಗಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಬಸ್ ನಿಲ್ದಾಣದ ಎದುರಿಗೆ ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಾರೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ತೆರಳಲು ರಸ್ತೆ ಕ್ರಾಸ್ ಮಾಡಲು ತೊಂದರೆ ಅನುಭವಿಸುವಂತಾಗಿದೆ.

ಪ್ರಯಾಣಿಕರಾದ ಕಮಲಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಕಲಬುರಗಿಗೆ ಹೋಗುವವರು, ಬಸ್ಸಿಗಾಗಿ ಕಾಯ್ತಿದ್ದೀವಿ. ಈ ಬಸ್ ನಿಲ್ದಾಣದಲ್ಲಿ ಕುಡಿಯಾಕ ನೀರಿಲ್ಲ. ಎಲ್ಲೆಂದರಲ್ಲಿ ಕಸ ತುಂಬಿಕೊಂಡೈತಿ, ಎಲ್ಲಂದ್ರ ಅಲ್ಲಿ ಉಗುಳಿರೋದು ಕಾಣ್ತೈತಿ, ಮಹಿಳೆಯರಿಗೆ ಸರಿಯಾದ ಶೌಚಾಲಯವಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಭ್ರಷ್ಟಾಚಾರ ಸಾಬೀತು ಮಾಡಿದರೆ ನನ್ನ ಆಸ್ತಿಯನ್ನೇ ಅವರಿಗೆ ಕೊಡುತ್ತೇನೆ: ಸಚಿವರಿಗೆ ಸಂಸದ ಸಿದ್ದೇಶ್ವರ ಸವಾಲು
ದಲಿತ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ಹರ್ಷವರ್ಧನ ಮಾತನಾಡಿ, “ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆಯ ಸಮಸ್ಯೆ ಎದ್ದು ಕಾಣುತ್ತಿರುವುದರಿಂದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಹಿರಿಯರಿಗೆ ತೊಂದರೆ ಉಂಟಾಗಿದೆ. ಈ ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ” ಎಂದು ಆರೋಪಿಸಿದರು.