ಜಿಪಿಟಿ ಶಿಕ್ಷಕರ ನೇಮಕಾತಿ 2022ನೇ ಸಾಲಿನಲ್ಲಿ ಸಾಮಾನ್ಯ ವರ್ಗದ ನೂರಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ, ನೇಮಕಾತಿ ಆದೇಶ ಪ್ರತಿ ನೀಡುವಂತೆ ವಿಜಯಪುರ ನಗರದ ಡಿಡಿಪಿಐ ಕಚೇರಿಯ ಎದುರು ಶಿಕ್ಷಕ ಅಭ್ಯರ್ಥಿಗಳು ಪ್ರತಿಭಟಿಸಿದ್ದಾರೆ.
ಹಿಂದುಳಿದ ವರ್ಗದ ಅಭ್ಯರ್ಥಿಗಳು ಮೀಸಲಾತಿ ಪಡೆಯದೇ ಸಾಮಾನ್ಯ ವರ್ಗದಲ್ಲಿ ಆಯ್ಕೆ ಆದರೂ, ಅಧಿಕಾರಿಗಳು ಸಿಂಧುತ್ವ ಕೇಳುತ್ತಿರುವುದನ್ನು ಪ್ರಶ್ನಿಸಿ ವಿಜಯಪುರದ ಡಿಡಿಪಿಐ ಕಚೇರಿ ಎದುರು ನೂರಾರು ಶಿಕ್ಷಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಸಾಮಾನ್ಯ ಕೆಟಗೆರಿಯಲ್ಲಿ ಆಯ್ಕೆ ಆದವರಿಗೆ ಸಿಂಧುತ್ವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿಗಳ ಆದೇಶವಿದ್ದರೂ, ಅಧಿಕಾರಿಗಳು ಸಿಂಧುತ್ವ ಕೇಳುತ್ತಿದ್ದಾರೆ. ಇದರಿಂದ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಜಿಲ್ಲೆಯ 700ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ ಪ್ರತಿಭಟನಾನಿರತರು.
ರಾಜ್ಯ ನಾಗರಿಕ ಸೇವಾದ ಸಾಮಾನ್ಯ ವರ್ಗದ ಹುದ್ದೆಗಳಿಗೆ ಮೀಸಲಾತಿ ಪಡೆಯದೇ ಆಯ್ಕೆಯಾದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಕಡ್ಡಾಯಗೊಳಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿ ಸೂಚಿಸಿದ್ದರು.
ರಾಜ್ಯದ ಅನುಸೂಚಿತ ಜಾತಿಗಳು, ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ನಿಯಮಗಳು 1992ರ ಅನ್ವಯ, ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಅಂತಿಮ ಆಯ್ಕೆ ಪಟ್ಟಿಯಲ್ಲಿ ವಿವಿಧ ಮೀಸಲಾತಿಯಡಿ ಆಯ್ಕೆ ಹೊಂದುವ ಹಾಗೂ ಸದರಿ ಮೀಸಲಾತಿಯಿಂದ ರಿಯಾಯಿತಿ ಪಡೆಯುವ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳು ಸಿಂಧುವೇ ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಸಿಂಧುತ್ವ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ.
ಕೆಲವೊಂದು ಸಮಸ್ಯೆಗಳನ್ನು ನಮಗೆ ತಿಳಿಸದೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೇಮಕಾತಿ ಆದೇಶ ಪ್ರತಿ ನೀಡುತ್ತಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಲ್ಲಿ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ. ತಕ್ಷಣವೇ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಡಿಡಿಪಿಐ ಮೂಲಕ ಅಭ್ಯರ್ಥಿಗಳು ಸರ್ಕಾರಕ್ಕೆ ಆಗ್ರಹಿಸಿದರು.
2022ನೇ ಸಾಲಿನ ಜಿಪಿಟಿ ಶಿಕ್ಷಕರ ನೇಮಕಾತಿಯಲ್ಲಿ ಸಾಮಾನ್ಯ ವರ್ಗದಲ್ಲಿ ನೂರಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರ ನೇಮಕಾತಿ ಆದೇಶ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಭಾವಿ ಶಿಕ್ಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.