ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?

Date:

ಬೆಂಗಳೂರಿನ ಮೂಲಸೌಕರ್ಯಕ್ಕೆಂದು ಬಿಡುಗಡೆಯಾದ ಹಣ ಶಾಸಕರು, ಕಾರ್ಪೊರೇಟರ್‌ಗಳು, ಮಂತ್ರಿಗಳು, ಅಧಿಕಾರಿಗಳ ತಿಜೋರಿ ಸೇರಿದೆ. ಇಂಥವರಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಬೆಂಗಳೂರು ದುಃಸ್ಥಿತಿ ಮುಟ್ಟಿದ್ದು, ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ಮಳೆ ನಗರದ ಜನರಿಗೆ ನರಕ ತೋರಿಸುತ್ತಿದೆ.

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಿಫಲವಾಗಿದೆ. ದಶಕಗಳಲ್ಲಿಯೇ ಕಾಣದಿದ್ದ ಬರಗಾಲ ರಾಜ್ಯವನ್ನು ಆವರಿಸಿದೆ. ಇದರ ನಡುವೆಯೇ ರಾಜ್ಯದ ಹಲವು ಭಾಗಗಳಲ್ಲಿ ಹಿಂಗಾರು ಮಳೆ ಆರ್ಭಟಿಸುತ್ತಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಗಾಲದಲ್ಲೂ ರಣಬಿಸಿಲಿನ ತಾಪವನ್ನುಣ್ಣುತ್ತಿದ್ದವರಿಗೆ ಹಿಂಗಾರಿನ ವರ್ಷಧಾರೆ ಸಂತೋಷವನ್ನು ನೀಡುತ್ತಿದೆ. ಆದರೆ, ಬೆಂಗಳೂರಿನ ಜನ ಮಾತ್ರ ಮಳೆ ಎಂದರೆ ಹೆದರಿಕೊಳ್ಳುವಂತಾಗಿದೆ. ಒಂದು ಸಣ್ಣ ಮಳೆಯೂ ಬೆಂಗಳೂರಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಹಿಂಗಾರು ಮಳೆ ಉದ್ಯಾನ ನಗರಿಯಲ್ಲಿ ಸೃಷ್ಟಿಸಿರುವ ಅವಾಂತರಗಳೇ ಅದಕ್ಕೆ ನಿದರ್ಶನ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಆನಂದರಾವ್ ಸರ್ಕಲ್, ಓಕಳಿಪುರ, ಲಿಂಗರಾಜಪುರ, ಶಿವಾನಂದ ಸರ್ಕಲ್‌ಗಳು ಜಲಾವೃತವಾಗಿ, ಜನಸಂಚಾರವೇ ಕಷ್ಟ ಎನ್ನುವಂತಾಗಿತ್ತು. ಆನಂದರಾವ್ ಸರ್ಕಲ್ ಸೇರಿದಂತೆ ಹಲವು ಅಂಡರ್‌ಪಾಸ್‌ಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದರು. ಹಿಂದೆಲ್ಲ ಅಲ್ಲಿ ಕಾರುಗಳು ಕೂಡ ಮುಳುಗಿ ಪ್ರಯಾಣಿಕರು ಜೀವಭಯ ಎದುರಿಸಿದ್ದರು. ಕಮರ್ಷಿಯಲ್ ಸ್ಟ್ರೀಟ್, ಕಾಮರಾಜ ರಸ್ತೆ ಮುಂತಾದ ವ್ಯಾಪಾರಿ ಕೇಂದ್ರಗಳಲ್ಲಿ ಮೊಣಕಾಲುದ್ದ ನೀರು ನಿಂತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಶಕಗಳ ಹಿಂದೆ ಬೆಂಗಳೂರು ಇಲ್ಲಿನ ಹಿತಕರ ಹವೆಗೆ ಹೆಸರುವಾಸಿಯಾಗಿತ್ತು. ಬೇಸಿಗೆಯಲ್ಲೂ ಬೆಂಗಳೂರಿನ ವಾತಾವರಣ ತಣ್ಣಗಿರುತ್ತಿತ್ತು. ಆದರೆ, ಬರಬರುತ್ತಾ ಬೆಂಗಳೂರಿನ ಬದುಕು ಹಲವು ಕಾರಣಗಳಿಂದ ನರಕಸದೃಶವಾಗಿದೆ. ಅದಕ್ಕೆ ಮುಖ್ಯ ಸಂಚಾರ ದಟ್ಟಣೆ, ಮಳೆಗಾಲದಲ್ಲಿ ನಗರದ ಹಲವು ರಸ್ತೆಗಳು, ಪ್ರದೇಶಗಳು ಮುಳುಗಡೆಯಾಗುವುದು ಮುಖ್ಯ ಕಾರಣಗಳಾಗಿವೆ.

ದೇಶದ ಐಟಿ ಹಬ್ ಎಂದು ಹೆಸರಾದ ಬೆಂಗಳೂರು ಇಂದು ಬದುಕುವುದಕ್ಕೆ ಅರ್ಹವೆ ಎನ್ನುವಂಥ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಬೆಂಗಳೂರು ನಗರವು ಇಂದು ಅತ್ಯಂತ ವಿಸ್ತಾರವಾಗಿ ಬೆಳೆದಿದ್ದು, ಅದರಲ್ಲಿ ತಗ್ಗು ಪ್ರದೇಶಗಳೂ ಕೂಡ ಸೇರಿವೆ. ಮಳೆ ಬಂದಾಗ ಅಂಥ ತಗ್ಗು ಪ್ರದೇಶಗಳು ಕೆರೆಗಳಂತಾಗುತ್ತವೆ. ಹಿಂದೊಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದವು. ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದು, 1960ರ ಹೊತ್ತಿಗೆ ನಗರದ ಸುತ್ತಮುತ್ತ 280 ಕೆರೆಗಳಿದ್ದವು. ಈಗ ಅವುಗಳ ಸಂಖ್ಯೆ 50 ದಾಟುವುದಿಲ್ಲ. ಕೆರೆಗಳಿದ್ದ ಜಾಗವೆಲ್ಲ ಬಡಾವಣೆಗಳಾಗಿವೆ. ಅಂಥ ಜನವಸತಿ ಪ್ರದೇಶಗಳು ಮಳೆಗಾಲದಲ್ಲಿ ಪ್ರವಾಹಕ್ಕೆ ಸಿಲುಕುತ್ತಿವೆ. ಮಳೆ ನೀರು ತುಂಬಿದ ಅಂಡರ್‌ಪಾಸ್‌ಗಳು ಮೃತ್ಯುಕೂಪಗಳಾಗುತ್ತಿವೆ. ಅಂಡರ್‌ಪಾಸ್‌ಗಳು, ರಸ್ತೆ ಗುಂಡಿಗಳು, ರಸ್ತೆ ಪಕ್ಕದ ವಿದ್ಯುತ್ ಕಂಬಗಳಲ್ಲಿ ನೇತಾಡುವ ತಂತಿಗಳು ಹಲವು ಜೀವಗಳನ್ನು ಬಲಿ ಪಡೆದಿವೆ.

ಬೆಂಗಳೂರಿನ ಜನ ಮಳೆಗಾಲದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೋ ಅದಕ್ಕೆಲ್ಲ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರ. ಬೆಂಗಳೂರಿನ ರಸ್ತೆ, ಚರಂಡಿ, ಮೇಲುಸೇತುವೆ, ಕೆಳಸೇತುವೆ ಇತ್ಯಾದಿಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಬಿಬಿಎಂಪಿಯದ್ದು. ಅವುಗಳ ಮೇಲ್ವಿಚಾರಣೆ ರಾಜ್ಯ ಸರ್ಕಾರದ್ದು. ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಬಿಬಿಎಂಪಿ ಮೂಲಕ ಬೆಂಗಳೂರಿನಲ್ಲಿ ನಡೆಯುವ ಪ್ರತಿ ಕಾಮಗಾರಿಯಲ್ಲೂ ಮಂತ್ರಿಗಳು, ಶಾಸಕರು, ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಕಾರ್ಪೊರೇಟರ್‌ಗಳ ಲಂಚಾವತಾರವಿದೆ. ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರವಿದೆ. ಇವರೆಲ್ಲ ಸೇರಿಕೊಂಡು ಒಂದು ಕಾಲದ ಸುಂದರ ನಗರವನ್ನು ಮೃತ್ಯುಕೂಪವಾಗಿ ಮಾರ್ಪಡಿಸಿದ್ದಾರೆ.

ನೆಲಕ್ಕೆ ಬಿದ್ದ ಮಳೆ ನೀರು ಸರಾಗವಾಗಿ ಚರಂಡಿ ಮೂಲಕ ಹರಿದು ಹೋಗುವ ವ್ಯವಸ್ಥೆ ನಗರದ ಅನೇಕ ಕಡೆ ಸಮರ್ಪಕವಾಗಿಲ್ಲ. ಉಳ್ಳವರು ಅಧಿಕಾರಿಗಳಿಗೆ, ಅಧಿಕಾರಸ್ಥರಿಗೆ ಲಂಚ ನೀಡಿ ಚರಂಡಿಗಳ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಕೆಲವು ತಿಂಗಳ ಹಿಂದೆ ಲೋಕಾಯುಕ್ತ ದಾಳಿಯಲ್ಲಿ ಕಂತೆಗಟ್ಟಲೇ ಹಣದೊಂದಿಗೆ ಸಿಕ್ಕಿಬಿದ್ದ ಕೆ ಆರ್ ಪುರ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಇಂಥ ಭೂಗಳ್ಳರಿಗೆ ನೆರವಾಗುವ ಮೂಲಕ ಅವರು ಕೋಟಿ ಕೋಟಿ ಲಂಚ ಹೊಡೆದಿದ್ದರು ಎನ್ನುವ ಆರೋಪಗಳಿಗೆ ಅವರ ನೂರಾರು ಕೋಟಿ ಅಕ್ರಮ ಹಣ ಪುಷ್ಟಿ ನೀಡಿತ್ತು. ಬೆಂಗಳೂರಿನ ಮೂಲಸೌಕರ್ಯಕ್ಕೆಂದು ಬಿಡುಗಡೆಯಾದ ಹಣ ಇಂಥವರ ತಿಜೋರಿ ಸೇರಿದೆ. ಇಂಥವರಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಬೆಂಗಳೂರಿನ ದುಃಸ್ಥಿತಿ ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದು, ಐಟಿ ಸಿಟಿಯ ಮಾನವನ್ನು ಹರಾಜು ಹಾಕುತ್ತಲೇ ಇದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿಯ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತದೆ ಎಂದು ಜನ ನಂಬಿದ್ದರು. ಪಾಲಿಕೆಯ ಚುನಾವಣೆಯನ್ನು ನಡೆಸುತ್ತಾರೆ ಎನ್ನುವ ನಂಬಿಕೆಯೂ ಇತ್ತು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ. ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಆಡಳಿತದ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳ ಕಾರ್ಯದಕ್ಷತೆಯ ಬಗ್ಗೆ ಹಲವು ಆರೋಪಗಳು ಬಂದಿವೆ. ಬಿಜೆಪಿ ಆಡಳಿತದಲ್ಲಿ ಮಂತ್ರಿಗಳ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಡಿ ಕೆಂಪಣ್ಣ, ಪಾಲಿಕೆಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಪ್ರಹ್ಲಾದ್ ಅವರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೆಸರಿನಲ್ಲಿ ಲಂಚ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆ ವಿಷಯವನ್ನು ಡಿ ಕೆ ಶಿವಕುಮಾರ್ ಆಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಬೆಂಗಳೂರಿನ ಮೂಲ ಸೌಕರ್ಯ ವೃದ್ಧಿ ಹೇಗೆ ಸಾಧ್ಯ? ಬಿಬಿಎಂಪಿ ಲಂಚ, ಕಮಿಷನ್, ದುರಾಡಳಿತದ ಕಬಂಧ ಬಾಹುಗಳಿಂದ ಬಿಡುಗಡೆಗೊಳ್ಳುವವರೆಗೆ ಸಣ್ಣ ಮಳೆಗೂ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿಯಾಗುವುದು, ಜನ ನರಕ ಅನುಭವಿಸುವುದು ತಪ್ಪಿದ್ದಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...