ವಿಜಯಪುರ ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುಂಪೊಂದು ಯುವಕನ ಮೇಲೆ ಗುಂಡಿನ ದಾಳಿ ನಡೆಸಿದೆ.
ದಾಳಿಯಿಂದಾಗಿ ಯುವಕ ಶೋಯೇಬ್ ಕಕ್ಕಳಮೇಲಿ ಅವರ ಕಿವಿಗೆ ತೀವ್ರವಾದ ಗಾಯಗಳಾಗಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪಾಲಿಕೆ ಸದಸ್ಯೆ ನಿಶಾತ್ ನದಾಫ್ ಅವರ ಪತಿ ಹೈದರ್ ನದಾಫ್ ಅವರ ಮೇಲೆ ಗುಂಡಿನ ದಾಳಿ ನಡೆದು ಅವರು ಅಸುನೀಗಿದ್ದರು. ಈ ಕೊಲೆಯ ದ್ವೇಷದ ಹಿನ್ನೆಲೆಯ ಪ್ರತೀಕಾರವಾಗಿ ಈ ಗುಂಡಿನ ದಾಳಿ ನಡೆದಿದೆ ಎಂದು ಅಂದಾಜಿಸಲಾಗಿದೆ. ದಾಳಿ ಮಾಡಿದ ದುಷ್ಕರ್ಮಿಗಳು ಬೈಕ್‌ಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಎರಡು ಗ್ಯಾಂಗ್‌ಗಳ ನಡುವೆ ಘರ್ಷಣೆ ನಡೆದಿದ್ದು, ಈ ಘರ್ಷಣೆ ವಿಕೋಪಕ್ಕೆ ತಿರುಗಿ ಗುಂಡಿನ ದಾಳಿ ನಡೆದಿದೆ. ತೀವ್ರವಾಗಿ ಗಾಯಗೊಂಡ ಶೋಯೇಬ್ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಳಗಾಗಿರುವ ಯುವಕ ಈ ಹಿಂದೆ ಹೈದರ್ ನದಾಫ್ ಕೊಲೆ ಪ್ರಕರಣದ ಆರೊಪಿಯಾಗಿರುವ ಶೇಖ್ ಮೊಹ್ಮದ್ ಮೋದಿ ಅವರ ಅಳಿಯ ಎನ್ನಲಾಗಿದೆ.
ಸ್ನೇಹಿತರೊಡನೆ ಶೊಯೇಬ್ ತೆರಳುತ್ತಿದ್ದ ವೇಳೆ ಗುಂಪಿನಲ್ಲಿ ಬಂದವರು ದಾಳಿ ನಡೆಸಿದ್ದಾರೆ. ಕೊಲೆಯಾದ ಹೈದರ್ ನದಾಫ್ ಬೆಂಬಲಿಗರಿಂದ ಈ ದಾಳಿ ನಡೆದಿದ್ದು, ಕಂಟ್ರೀ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಮೇ 5 ರಂದು ಹೈದರ್ ನದಾಫ್ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ಮೊಹಮ್ಮದ್ ಮೋದಿ ಹಾಗೂ ಇತರ ಐವರ ಹತ್ಯೆ ನಡೆಸಿಡಿದ್ದಾರೆಂದು ದೂರು ದಾಖಲಾಗಿತ್ತು. ಶೇಖ್ ಮೊಹಮ್ಮದ್ ಮೋದಿ ಸಹಿತ ಏಳು ಆರೋಪಿಗಳ ಬಂಧನವಾಗಿದ್ದು, ಈ ಪೈಕಿ ನಾಲ್ವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.