ಮೂರು ಬಾರಿ ಅಧಿಕಾರದಲ್ಲಿರುವ ಹಾಲಿ ಸಂಸದರಿಂದ ಕೊಲ್ಹಾರ ಪಟ್ಟಣಕ್ಕೆ ಯಾವುದೇ ಉಪಯೋಗವಾಗಿಲ್ಲ ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲ್ಲು ದೇಸಾಯಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, “ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಉತ್ತಮ ಸಂಘಟಕರು, ಅಭಿವೃದ್ಧಿಪರ ಚಿಂತಕರಾಗಿರುವುದರಿಂದ ಇವರನ್ನು ಗೆಲ್ಲಿಸುವುದು ನಮಗೆಲ್ಲ ಅನಿವಾರ್ಯವಾಗಿದೆ. ಜಿಲ್ಲೆ ಮತ್ತು ನಮ್ಮ ಪಟ್ಟಣದ ಪ್ರಗತಿಗೆ ಆಲಗೂರರು ಶ್ರಮಿಸಲಿದ್ದಾರೆ. ಸಾಮಾನ್ಯ ಜನರೂ ಕೂಡಾ ಜಿಗಜಿಣಗಿಯವರಿಂದ ಜುಗುಪ್ಸೆ ಹೊಂದಿದ್ದಾರೆ” ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, “ರಮೇಶ ಜಿಗಜಿಣಗಿಯವರಿಂದ ಏನೂ ಲಾಭವಾಗಿಲ್ಲ ಎನ್ನುವುದು ನಮ್ಮ ಟೀಕೆಯಲ್ಲ, ಇದು ವಾಸ್ತವ” ಎಂದು ಹೇಳಿದರು.
“ಎರಡು ಬಾರಿ ಚಿಕ್ಕೋಡಿ, ಮೂರು ಸಲ ವಿಜಯಪುರ ಎಂಪಿಯಾಗಿ ಅವರ ಸಾಧನೆ ಶೂನ್ಯ. ಜಿಲ್ಲೆಗಾಗಿ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳಿಲ್ಲ. ಇದು ಬದಲಾವಣೆ ಕಾಲವಾಗಿದ್ದು, ನನಗೆ ಅವಕಾಶ ನೀಡಿದರೆ ನನ್ನ ಅನುಭವ ಹಾಗೂ ಪ್ರಾಮಾಣಿಕ ಶ್ರಮದಿಂದ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪರಮೇಶ್ವರ್, ರಾಜಣ್ಣ, ಮುದ್ದಹನುಮೇಗೌಡ ವಲಸಿಗರು: ಬಿಜೆಪಿ ಅಭ್ಯರ್ಥಿ ಠಕ್ಕರ್
ಮಲ್ಲು ದೇಸಾಯಿ, ಅಧ್ಯಕ್ಷ ಮುಸ್ಕಾನ್ ಶಿರಬೂರ, ರಫೀಕ್ ಪಕಾಲಿ, ಮುಖಂಡರಾದ ಬಿ ಎಸ್ ಪತಂಗಿ, ಕಮಲವ್ವ ಮಾಕಾಳಿ, ಗಂಗಾಧರ ಸಂಬಣ್ಣಿ, ಉಸ್ಮಾನ್ ಪಟೇಲ, ದಸ್ತೀಗರಸಾಬ್ ಸೇರಿದಂತೆ ನೂರಾರು ಮಂದಿ ಸ್ಥಳೀಯರು, ಪ್ರಮುಖರು ಇದ್ದರು.
