ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಫ್‌ಎಕ್ಯೂ (FAQ) ಗುಣಮಟ್ಟದ ಉದ್ದಿನಕಾಳು ಖರೀದಿಸಲು ನಿರ್ಧರಿಸಲಾಗಿದ್ದು, ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಬಾಗಲಕೋಟೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಅಧಿಸೂಚನೆಯಂತೆ ಆದೇಶ ಹೊರಡಿಸಿದ ದಿನಾಂಕದಿಂದ 80 ದಿನಗಳವರೆಗೆ ರೈತರ ನೋಂದಣಿಗೆ ಹಾಗೂ 90 ದಿನಗಳವರೆಗೆ ಉದ್ದಿನಕಾಳು ಖರೀದಿಗೆ ಕಾಲಾವಕಾಶ ನಿಗದಿಪಡಿಸಲಾಗಿದೆ.
ನೋಂದಣಿ ಪ್ರಕ್ರಿಯೆಯ ಜತೆಗೆ ಖರೀದಿ ಕಾರ್ಯವನ್ನೂ ಆರಂಭಿಸಲಾಗುತ್ತಿದೆ ಎಂದು ಹೇಳಿದರು.ರೈತರು ಬೆಳೆದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಉದ್ದು ಖರೀದಿಸಲಾಗುತ್ತದೆ. ಎಫ್‌ಎಕ್ಯೂ ಗುಣಮಟ್ಟದ ಕಾಳು ಖರೀದಿಗೆ ರೈತರ ಜಮೀನಿನ ವಿವರಗಳನ್ನು ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಪರಿಶೀಲಿಸಿ ಖರೀದಿ ಪ್ರಮಾಣ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಗುಣಮಟ್ಟದ ಮಾನದಂಡಗಳೇನು?ಉದ್ದಿನಕಾಳು ಖರೀದಿಗೆ ನಿಗದಿಪಡಿಸಿರುವ ಎಫ್‌ಎಕ್ಯೂ ಗುಣಮಟ್ಟದ ಮಾನದಂಡಗಳ ಪ್ರಕಾರ, ಧೂಳು, ಹರಳು, ಹೊಟ್ಟು ಸೇರಿದಂತೆ ಅನ್ಯ ವಸ್ತುಗಳು ಶೇ.2, ಬೆರೆಕೆ ಮಿಶ್ರಣ ಶೇ.3, ಹಾಳಾದ ಕಾಳುಗಳು ಶೇ.3, ಒಡೆದ ಕಾಳುಗಳು ಶೇ.4, ಅಪೂರ್ಣ ಕಾಳುಗಳು ಶೇ.3 ಹಾಗೂ ಹುಳುಕಾದ ಕಾಳುಗಳು ಶೇ.4ರ ಮಿತಿಯೊಳಗಿರಬೇಕು. ಕಾಳಿನ ತೇವಾಂಶ ಶೇ.12ಕ್ಕಿಂತ ಹೆಚ್ಚಿರಬಾರದು ಎಂದು ಸ್ಪಷ್ಟಪಡಿಸಿದರು.
ನೋಂದಣಿಗೆ ಅಗತ್ಯ ದಾಖಲೆಗಳುಜಿಲ್ಲೆಯ ರೈತರು ತಮ್ಮ ಸಮೀಪದ ಖರೀದಿ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪಹಣಿ ಪತ್ರಿಕೆ ಹಾಗೂ ಆಧಾರ್‌ಗೆ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಬಾಗಲಕೋಟೆ ಶಾಖೆಯ ವ್ಯವಸ್ಥಾಪಕರನ್ನು ಮೊ. 9449864458 ಅಥವಾ ಸಹಾಯಕ ನಿರ್ದೇಶಕರನ್ನು ಮೊ. 9035353912 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಹಕಾರ ಇಲಾಖೆಯ ಉಪ ನಿಬಂಧಕ ದಾನಯ್ಯ ಹಿರೇಮಠ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಭಾವಿಹಾಳ, ಕಾರ್ಯದರ್ಶಿಗಳಾದ ವಿ.ಡಿ. ಪಾಟೀಲ, ಆರ್.ಎಂ. ದಂಡಿನ, ರವಿ ರಾಠೋಡ, ಪಟ್ಟಣಶೆಟ್ಟಿ, ಶರಣರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



