ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ ಮತ್ತು ಕಣ್ಣುಗಳು ಸೂಕ್ಷ್ಮವಾಗಿರುವುದರಿಂದ ಜೇನುನೊಣಗಳ ಕಡಿತವನ್ನು ಅವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಈ ವಿಧಾನದಲ್ಲಿ ಆನೆಗಳಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡದೆ ಅವುಗಳ ಪ್ರವೇಶವನ್ನು ತಡೆಯುವುದು ಉದ್ದೇಶ.
ರಾಜ್ಯದ ಮಲೆನಾಡಿನಲ್ಲಿ ಈಗ ಆನೆ ದಾಳಿಯದ್ದೇ ಸುದ್ಧಿ. ಕಳೆದ ಕೆಲವು ದಿನಗಳಿಂದ ಆನೆಗಳ ದಾಳಿಯಿಂದ ಹಲಾವರು ಜನ ಮೃತಪಟ್ಟ ಮೇಲಂತೂ ಅರಣ್ಯ ಇಲಾಖೆ ಮೇಲೆ ಜನರ ಆಕ್ರೋಶ ಹೆಚ್ಚಾಗಿದೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅರಣ್ಯ ಇಲಾಖೆ ಕಾಡಾನೆಗಳನ್ನು ಹಾಸನದಿಂದ, ಚಿಕ್ಕಮಗಳೂರಿಗೆ ಓಡಿಸುವ ಕಾರ್ಯಕ್ಕೆ ಕೈ ಹಾಕಿತು. ಇದರಿಂದ ಇಲಾಖೆಗೆ ಮತ್ತೊಂದು ಸಂಕಷ್ಟ ಎದುರಾಯಿತು. ಹಾಸನದಿಂದ ಕಾಡಾನೆಗಳನ್ನು ಚಿಕ್ಕಮಗಳೂರಿಗೆ ಓಡಿಸುತ್ತಿರುವುದಕ್ಕೆ ಚಿಕ್ಕಮಗಳೂರಿನ ಜನರ ರೊಚ್ಚಿಗೆದ್ದರು. ವಿಷಯ ಎಷ್ಟು ಗಂಭೀರವಾಯಿತೆಂದರೆ ಇದು ರಾಜಕೀಯ ಜಟಾಪಟಿಗೂ ಸಾಕ್ಷಿಯಾಯಿತು. ಚಿಕ್ಕಮಗಳೂರು ಜಿಲ್ಲೆಯ ಶಾಸಕರು ರಾಜಿನಾಮೆ ಕೊಡುವ ಎಚ್ಚರಿಕೆ ಕೊಟ್ಟರು. ಇನ್ನೂ ಒಂದು ಹೆಜ್ಜೆ ಮುಂದೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿಯೇ ಬಿಟ್ಟರು. ಇದೆಲ್ಲದರ ಪರಿವೇ ಇಲ್ಲದೆ ಆನೆಗಳು ತಮಗೆ ದಾರಿ ಸಿಕ್ಕಿದ ಕಡೆ ಓಡುತ್ತಲಿವೆ.

ಆನೆ ಮಾನವ ಸಂಘರ್ಷ ನೆನ್ನೆ ಮೊನ್ನೆಯದಲ್ಲ, ಶತಮಾನಗಳಿಂದಲೂ ನಡೆಯುತ್ತಲಿರುವ ಪ್ರಕ್ರಿಯೆ. ಅಭಿವೃದ್ಧಿಗಾಗಿ ಮನುಷ್ಯ ಕಾಡನ್ನು ಅತಿಕ್ರಮಣ ಮಾಡಿದಾಗಲಿಂದ ಈ ಸಂಘರ್ಷ ಇನ್ನೂ ಹೆಚ್ಚಾಯಿತು. ಮಾನವ, ಆನೆ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಡೆಯಿಂದ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಟ್ರೆಂಚ್ ತೆಗೆಸುವುದು, ಸೋಲಾರ್ ವಿದ್ಯುತ್ ಬೇಲಿ, ಆನೆ ಬಂದಾಗ ಪಟಾಕಿ ಸಿಡಿಸಿ ಓಡಿಸುವುದು, ರೈಲು ಕಂಬಿಯ ತಡೆಗೋಡೆ ನಿರ್ಮಾಣ. ಇವೆಲ್ಲಾ ಅನುಷ್ಠಾನಗೊಳಿಸಿದಾಗ ಪರಿಣಾಮಕಾರಿಯಾಗಿಯೆನೋ ಇತ್ತು. ಆದರೆ ಕಾಲ ಕಳೆದಂತೆ ಆನೆಗಳು ತಮ್ಮದೇ ಆದ ದಾರಿ ಹುಡುಕಿಕೊಂಡು ನಾಡಿನೆಡೆಗೆ ಬರುವುದನ್ನು ತಪ್ಪಿಸಲಾಗಲಿಲ್ಲ. ಜೊತೆಗೆ ಆನೆಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವುದು ಮತ್ತು ಕಾಡು ಕಡಿಮೆಯಾಗುತ್ತಿರುವುದು. ಆದರೆ, ಆನೆ ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹೊಸ ಆವಿಷ್ಕಾರಗಳು ಆಗುತ್ತಲೇ ಇವೆ. ಈ ರೀತಿಯ ಹೊಸ ಆವಿಷ್ಕಾರವೆಂದರೆ ಜೇನು ಸಾಕಣೆ ಮೂಲಕ ಆನೆಗಳಿಂದ ರಕ್ಷಣೆ ಪಡೆಯುವುದು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು.

ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಅಲೆಟ್ಟಿ ಮುಂತಾದ ಗ್ರಾಮಗಳ ಜನರು ಆನೆಗಳ ಉಪಟಳದಿಂದ ಬೇಸತ್ತಿದ್ದರು. ಆನೆ ಕಂದಕ, ಸೋಲಾರ್ ಬೇಲಿ, ಸಿಮೆಂಟ್ ಹಲಗೆ ಅಳವಡಿಕೆ… ಹೀಗೆ ಹಲವು ತಂತ್ರಗಳನ್ನು ಅನುಷ್ಠಾನಗೊಳಿಸಿದ್ದರೂ ಕೂಡ ಇವ್ಯಾವುವು ಹೇಳಿಕೊಳ್ಳುವಷ್ಟು ಪರಿಣಾಮಮಕಾರಿಯಾಗಲಿಲ್ಲ.
ಈ ಪ್ರಯೋಗ ಹೇಗೆ ಕಾರ್ಯನಿರ್ವಹಿಸುತ್ತದೆ?
- ಕಾಡಾನೆಗಳು ತೋಟಗಳಿಗೆ ಪ್ರವೇಶಿಸುವ ದಾರಿಗಳನ್ನು ಗುರುತಿಸಲಾಗುತ್ತದೆ.
- ಆನೆಗಳು ಬರುವ ಮಾರ್ಗದಲ್ಲಿ ಜೇನು ಪೆಟ್ಟಿಗೆಯನ್ನು ನಿರ್ದಿಷ್ಟ ಅಂತರದಲ್ಲಿ ಇರಿಸಲಾಗುತ್ತದೆ.
- ಪೆಟ್ಟಿಗೆಗಳನ್ನು ಹಗ್ಗದ ಮೂಲಕ ಪರಸ್ಪರ ಸಂಪರ್ಕಿಸಲಾಗುತ್ತದೆ..
- ಆನೆಗಳು ಹಗ್ಗವನ್ನು ಎಳೆದಾಗ ಪೆಟ್ಟಿಗೆಗಳು ಅಲುಗಾಡಿ ಜೇನುನೊಣಗಳು ಹೊರಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ.
- ಜೇನುನೊಣಗಳ ಗುಂಪು ಮತ್ತು ಅವುಗಳ ಶಬ್ದದಿಂದ ಆನೆಗಳು ಆತಂಕಗೊಂಡು ಹಿಂದಕ್ಕೆ ಸರಿಯುತ್ತವೆ.
ಆನೆಗಳ ಸೊಂಡಿಲಿನ ಒಳಭಾಗ ಮತ್ತು ಕಣ್ಣುಗಳು ಸೂಕ್ಷ್ಮವಾಗಿರುವುದರಿಂದ ಜೇನುನೊಣಗಳ ಕಡಿತವನ್ನು ಅವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಈ ವಿಧಾನದಲ್ಲಿ ಆನೆಗಳಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡದೆ ಅವುಗಳ ಪ್ರವೇಶವನ್ನು ತಡೆಯುವುದು ಉದ್ದೇಶ.
ಜೇನುನೊಣಗಳ ಬೇಲಿ ಪ್ರಯೋಗ ಮೊದಲು ನಡೆದದ್ದು ಎಲ್ಲಿ?
ಜೇನು ನೊಣಗಳ ಮೂಲಕ ಆನೆ ದಾಳಿಯನ್ನು ತಡೆಯುವ ಉದ್ದೇಶದಿಂದ ರಾಜ್ಯದ ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಕಾಲೇಜಿನ ತಾಂತ್ರಿಕ ಸಹಕಾರದೊಂದಿಗೆ KVIC ಪ್ರಾಜೆಕ್ಟ್ RE-HAB ಅನ್ನು 2021ರ ಮಾರ್ಚ್ 15ರಂದು ಪ್ರಾಯೋಗಿಕವಾಗಿ ಆರಂಭಿಸಲಾಯಿತು.
ನಂತರ ನಾಗರಹೊಳೆ ವ್ಯಾಪ್ತಿಯ ಕೊಡಂಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಪ್ರಯೋಗ ನಡೆಸಲಾಯಿತು. KVIC ಪ್ರಕಟಿಸಿದ ಮಾಹಿತಿಯ ಪ್ರಕಾರ, ಕೊಡಗಿನಲ್ಲಿ ಆರು ತಿಂಗಳ ಅವಧಿಯಲ್ಲಿ ಆನೆಗಳ ದಾಳಿಯಲ್ಲಿ ಶೇಕಡಾ 70ಕ್ಕೂ ಹೆಚ್ಚು ಇಳಿಕೆ ಕಂಡುಬಂದಿತ್ತು.
ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಂಶೋಧಕರಾದ ಆರ್.ಎನ್. ಕೆಂಚರೆಡ್ಡಿ ಅವರ ನೇತೃತ್ವದಲ್ಲಿ ನಡೆಸಿದ ಒಂದು ವರ್ಷದ ಅಧ್ಯಯನದಲ್ಲಿ ಕೊಡಗು ಜಿಲ್ಲೆಯ ಎಂಟು ಸ್ಥಳಗಳಲ್ಲಿ ಭಾರತೀಯ ಜೇನುನೊಣಗಳನ್ನು ಬಳಸಿ ಪ್ರಯೋಗ ನಡೆಸಲಾಗಿತ್ತು.


- ಆನೆಗಳ ಸಂಚಾರ ಮಾರ್ಗದಲ್ಲಿ ಜೇನುಪೆಟ್ಟಿಗೆಗಳನ್ನು ಅಳವಡಿಸಲಾಗಿತ್ತು.
- ಆರಂಭದಲ್ಲಿ ಕೆಲವು ಆನೆಗಳು ಪೆಟ್ಟಿಗೆಗಳನ್ನು ನಾಶಪಡಿಸಲು ಪ್ರಯತ್ನಿಸಿದವು.
- ಕೆಲವು ಆನೆಗಳು ಪೆಟ್ಟಿಗೆಗಳನ್ನು ತಪ್ಪಿಸಿ ಹೊಸ ಮಾರ್ಗಗಳನ್ನು ಹುಡುಕಿದವು.
- ನಂತರ ಆನೆಗಳು ತಮ್ಮ ಮೂಲ ಮಾರ್ಗವನ್ನು ಬದಲಾಯಿಸಿರುವುದು ಕಂಡುಬಂದಿತು.
- ಅಧ್ಯಯನದ ಪ್ರಕಾರ ಶೇಕಡಾ 70ರಷ್ಟು ಸಂದರ್ಭಗಳಲ್ಲಿ ಆನೆಗಳು ಜೇನು ಪೆಟ್ಟಿಗೆಗಳನ್ನು ಕಂಡು ಹಿಂದಕ್ಕೆ ಸರಿದಿದ್ದವು.
ಕೊಡಗಿನಲ್ಲಿ ಯಶಸ್ವಿವಾಗಿ ಪ್ರಯೋಗಿಸಲಾದ ಜೇನುನೊಣಗಳ ಬೇಲಿ ಮಾದರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲಿನ ದೇವರಗುಂಡದಲ್ಲಿ ಅಳವಡಿಸಲಾಗಿದೆ.
2022 ಫೆಬ್ರವರಿಯಲ್ಲಿ ಖಾದಿ ಮತ್ತು ಗ್ರಾಮೊದ್ಯೋಗ ಆಯೋಗದ ತಂಡ ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ, ಕೊಲ್ಲಮೊಗ್ರ, ಕಲ್ಮಕಾರು ಮತ್ತು ಮಂಡೆಕೋಲು ಗ್ರಾಮಗಳಿಗೆ ಭೇಟಿ ನೀಡಿ ರೈತರು, ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು. 2023 ಜನವರಿಯಲ್ಲಿ ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಅಧ್ಯಕ್ಷ ಮನೋಜ್ಕುಮಾರ್ ಅವರು ಮಂಡೆಕೋಲು ಗ್ರಾಮದ ದೆವರಗುಂಡದಲ್ಲಿ ಗ್ರಾಪಂ ಸದಸ್ಯ ಬಾಲಚಂದ್ರ ದೇವರಗುಂಡ ಅವರ ತೋಟದಲ್ಲಿ ಆನೆಗಳು ಪ್ರವೇಶಿಸುವ ಜಾಗದಲ್ಲಿ ಮೂರು ಅಡಿ ಅಂತರದಲ್ಲಿ 10 ಜೇನುಪೆಟ್ಟಿಗೆಗಳನ್ನು ಇಡುವ ಮೂಲಕ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದರು.

ಈ ಯೋಜನೆಯಲ್ಲಿ 35 ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು ಅವರಿಗೆ 200 ಪೆಟ್ಟಿಗೆಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮಾಹಿತಿಯಲ್ಲಿದೆ. ಆಯ್ಕೆಯಾದ ರೈತರಿಗೆ ಜೇನು ಸಾಕಾಣಿಕೆ ತರಬೇತಿ ನೀಡಲಾಗಿದೆ. ಜೇನುನೊಣಗಳ ಜೀವಂತ ಕಾಲೋನಿಗಳು ಮತ್ತು ಜೇನುಕೃಷಿ ಉಪಕರಣಗಳನ್ನು ಒದಗಿಸಲಾಗಿದೆ.
ರೈತರಿಗೆ ಇದರಿಂದ ಆಗುವ ಪ್ರಯೋಜನಗಳು
- ಈ ಯೋಜನೆಯಿಂದಾಗಿ ಆನೆಗಳನ್ನು ತಡೆಯುವುದರ ಜೊತೆಗೆ ರೈತರಿಗೆ ಜೇನು ಕೃಷಿಯ ಮೂಲಕ ಪರ್ಯಾಯ ಆದಾಯದ ಮಾರ್ಗವನ್ನೂ ಒದಗಿಸುತ್ತದೆ.
- ಜೇನುತುಪ್ಪ ಉತ್ಪಾದನೆ ಮತ್ತು ಮಾರಾಟದಿಂದ ಹೆಚ್ಚುವರಿ ಆದಾಯ
- ಜೇನುನೊಣಗಳಿಂದ ಪರಾಗಸ್ಪರ್ಶ ಹೆಚ್ಚಾಗಿ ಕೃಷಿ ಉತ್ಪಾದನೆಗೆ ನೆರವು
- ಕೃಷಿ ತೋಟಗಳಿಗೆ ಕಾಡಾನೆಗಳ ಪ್ರವೇಶವನ್ನು ಕಡಿಮೆ ಮಾಡುವ ಪ್ರಯತ್ನ
- ವಿದ್ಯುತ್ ಬೇಲಿ, ಕಂದಕಗಳಂತಹ ತಡೆ ವ್ಯವಸ್ಥೆಗಳಿಗೆ ಪರ್ಯಾಯವಾಗಿ ಪರಿಸರಸ್ನೇಹಿ ವಿಧಾನ
- ಗ್ರಾಮೀಣ ಪ್ರದೇಶದಲ್ಲಿ ಜೇನುಕೃಷಿ ಆಧಾರಿತ ಉದ್ಯೋಗಾವಕಾಶ


ದೇಶದ ಇತರೆ ರಾಜ್ಯಗಳಲ್ಲೂ ಈ ಯೋಜನೆ ಅನುಷ್ಠಾನ
ಕರ್ನಾಟಕದ ಕೊಡಗಿನಲ್ಲಿ ಆರಂಭಿಸಿದ ಪ್ರಯೋಗದ ಫಲಿತಾಂಶದಿಂದ ಉತ್ತೇಜಿತವಾದ KVIC ದೇಶಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲು ಆರಂಭಿಸಿತು.
- ಮೊದಲಿಗೆ 2021 ಡಿಸೆಂಬರ್ನಲ್ಲಿ ಅಸ್ಸಾಂ ರಾಜ್ಯದ, ಗೋಲ್ಪಾರಾ ಜಿಲ್ಲೆಯ ಮೊರ್ನೋಯಿ ಮತ್ತ ದಹಿಕಾಟಾ ಗ್ರಾಮಗಳಲ್ಲಿ ಒಟ್ಟು 33 ರೈತರಿಗೆ 330 ಜೇನುಪೆಟ್ಟಿಗೆಗಳನ್ನು ನೀಡಲಾಯಿತು.
- ಜೂನ್ 2022ರಲ್ಲಿ ಒಡಿಶಾದ ಅಂಗುಲ್ ಜಿಲ್ಲೆಯ, ಅಥಮಲ್ಲಿಕ್ ಅರಣ್ಯ ವಿಭಾಗದ ಲಕ್ಷ್ಮೀಪುರ ಮತ್ತು ರತಿಪುರ ಗ್ರಾಮಗಳಲ್ಲಿ
- ಉತ್ತರಾಖಂಡ – ನೈನಿತಾಲ್ ಜಿಲ್ಲೆಯ ಚೌಸ್ಲಾ ಗ್ರಾಮ, ಫತೇಪುರ್ ಅರಣ್ಯ ವ್ಯಾಪ್ತಿ, ಹಲ್ದ್ವಾನಿ ಪ್ರದೇಶಗಳ ರೈತರಿಗೆ 330 ಜೇನುಪೆಟ್ಟಿಗೆಗಳ ಜೊತೆ ಜೇನುನೊಣಗಳ ಕಾಲೋನಿ, ಜೇನುಕೃಷಿ ಉಕರಣಗಳು, ಜೇನುತುಪ್ಪ ತೆಗೆಯುವ ಯಂತ್ರಗಳನ್ನು ಕೊಡಲಾಯಿತು.
- ಮಹಾರಾಷ್ಟ್ರದಲ್ಲಿ KVIC ಅಡಿಯಲ್ಲಿ ಕಾರ್ಯನಿರ್ವಹಿಸುವ ಪುಣೆಯ Central Bee Research Training Institute ಆನೆಗಳ ತಡೆಗೆ ಜೇನುನೊಣಗಳ ಬೇಲಿ ನಿರ್ಮಿಸುವ ಕುರಿತು ಪ್ರಾಥಮಿಕ ಕ್ಷೇತ್ರ ಪ್ರಯೋಗಗಳನ್ನು ನಡೆಸಿತ್ತು.
- ಪಶ್ಚಿಮ ಬಂಗಾಳದಲ್ಲಿ ಮಾನವ-ಆನೆ ಸಂಘರ್ಷ ಗಂಭೀರ ಸಮಸ್ಯೆಯಾಗಿದೆ. 2021ರಲ್ಲಿ KVIC ಈ ರಾಜ್ಯದಲ್ಲಿ RE-HAB ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸುವುದಾಗಿ ಘೋಷಿಸಿತ್ತು. 2023ರ ವೇಳೆಗೆ ರಾಜ್ಯಕ್ಕೆ ಯೋಜನೆ ಮಂಜೂರಾಗಿರುವುದಾಗಿಯೂ ತಿಳಿಸಿತ್ತು.


ಭೂಮಿ ಮೇಲೆ ಜೀವರಾಶಿಗಳು ಇರುವವರೆಗೂ ಮಾನ-ಪ್ರಾಣಿ ಸಂಘರ್ಷ ತಪ್ಪುವುದಿಲ್ಲ. ಆದರೆ ಜೀವಹಾನಿ ತಡೆಯಲು ಪ್ರಕೃತಿಯಲ್ಲೇ ಹಲವಾರು ಪರಿಹಾರಗಳು ಇರುತ್ತವೆ ಅದನ್ನು ನಾವು ಕಂಡುಕೊಳ್ಳಬೇಕಷ್ಟೆ.
ಪೂರಕ ಮಾಹಿತಿ: Etv bharath




