ಮುದ್ದೇಬಿಹಾಳ ತಾಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ತಮ್ಮ 2019ರ ಜುಲೈ ತಿಂಗಳ ಗೌರವ ಧನವನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಬೆನ್ನಲ್ಲೇ, ನೌಕರರ ಖಾತೆಗೆ ಜಮೆ ಮಾಡಲಾಗಿದ್ದು, ಹೋರಾಟ ಕೈಬಿಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಬರಬೇಕಾಗಿದ್ದ 2019ರ ಜುಲೈ ತಿಂಗಳ ಗೌರವ ಧನ ಪಾವತಿ ಮಾಡಿರಲಿಲ್ಲ. ಈ ಸಮಸ್ಯೆಯನ್ನು ಸಂಘವು ಕೈಗೆತ್ತಿಕೊಂಡು ವಿವಿಧ ಹಂತದ ಹೋರಾಟಗಳನ್ನು ನಡೆಸಿತ್ತು.
ಇತ್ತೀಚೆಗೆ ನಡೆದ ಒಂದು ವಾರದ ಸತತ ಹೋರಾಟ ಮತ್ತು ಅದರ ನಂತರ ಆದ ಫಾಲವಪ್ ನಿಂದಾಗಿ ಸರ್ಕಾರದ ಹಂತದಲ್ಲಿ ಮತ್ತು ಇಲಾಖೆ ಮಟ್ಟದಲ್ಲಿ ವಿವಿಧ ಸಭೆಗಳನ್ನು ಸಂಘ ನಡೆಸಿತ್ತು. ಇದರ ಫಲವಾಗಿ, ಮುದ್ದೇಬಿಹಾಳ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ 2019ರ ಜುಲೈ ತಿಂಗಳ ಗೌರವ ಧನವನ್ನು ಇಲಾಖೆ ಅವರವರ ಬ್ಯಾಂಕ್ ಖಾತೆಗೆ ಜಮ ಮಾಡಿದೆ.
ಜಯ ಸಿಗುವವರೆಗೂ ನಿರಂತರವಾಗಿ ಹೋರಾಡಿ ಗೆದ್ದಿರುವ ಮುದ್ದೇಬಿಹಾಳ ತಾಲೂಕಿನ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಸಂಘದ ರಾಜ್ಯ ಸಮಿತಿಯು ಅಭಿನಂದಿಸಿದೆ.
ಈ ವೇಳೆ ರಾಜ್ಯ ಅಧ್ಯಕ್ಷರು ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ (ಎಐಯುಟಿಯುಸಿ) ಉಮಾದೇವಿ ಎಂ, ಮಲ್ಲಿಕಾರ್ಜುನ್ ಎಚ್. ಟಿ, ನಿಂಗಮ್ಮ ಹಿರೇಮಠ್, ಭರತ್ ಕುಮಾರ್, ಸಾವಿತ್ರಿ ನಾಗರತ್ತಿ, ಗುರುಬಾಯಿ ಮಲಗೌಡ್ರ್, ಕಲಾವತಿ ಪಾದಗಟ್ಟಿ, ಕಲಾವತಿ ವಂದಲಾ, ಸುರೇಖಾ ಹಿರೇಮಠ್ ಇತರರು ಇದ್ದರು.