ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಬರ ಪರಿಹಾರ, ಬೆಳೆ ಸಾಲ ಮನ್ನಾ ವಿಚಾರಗಳನ್ನೇ ಮೊದಲ ನಿಲುವಳಿಯಾಗಿ ಪ್ರಸ್ತಾಪ ಮಾಡಲಾಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಪಾಳಾ ಗ್ರಾಮಕ್ಕೆ ಭೇಟಿ ನೀಡಿ, ಬರ ಪರಿಸ್ಥಿತಿಯ ಬಗ್ಗೆ ಅವರು ಪರಿಶೀಲನೆ ನಡೆಸಿದರು. ರೈತರೊಂದಿಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಅವರು, “ರೈತರಿಗೆ ಇದುವರೆಗೂ ಬರ ಪರಿಹಾರದ ಹಣ ಬಂದಿಲ್ಲ. ಪರಿಹಾರ ಕೊಡುವಂತೆ ರೈತರು ಕೇಳಿದ್ದಾರೆ. ಅಧಿವೇಶನದಲ್ಲಿ ಬರ ಪರಿಹಾರ ಮತ್ತು ಸಾಲ ಮನ್ನಾ ಬಗ್ಗೆ ಪ್ರಸ್ತಾಪ ಮಾಡುತ್ತೇನೆ” ಎಂದಿದ್ದಾರೆ.
ಕಲಬುರಗಿ ರೈತರು ಇಡೀ ರಾಜ್ಯಕ್ಕೆ ತೊಗರಿ ಪೂರೈಕೆ ಮಾಡುತ್ತಾರೆ. ಈ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ತೊಗರಿ ಬೆಳೆ ನಾಶವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
“ಬರ ಪರಿಹಾರ ವಿತರಿಸುವಂತೆ ಹಲವು ಬಾರಿ ಒತ್ತಾಯಿಸಿದರೂ ಸರ್ಕಾರ ರೈತರ ಖಾತೆಗೆ ಹಣ ಜಮೆ ಮಾಡಿಲ್ಲ. ನಾನೂ ಕಂದಾಯ ಸಚಿವನಾಗಿದ್ದೆ. ಆಗ ಒಂದು ತಿಂಗಳ ಒಳಗೆ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ನಾನು ಕೇಂದ್ರ ಸರ್ಕಾರದ ಕಡೆ ನೋಡದೆ, ಪರಿಹಾರ ವಿತರಿಸಿದ್ದೆವು. ಆದರೆ, ಈಗಿನ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ” ಎಂದು ಆರೋಪಿಸಿದರು.