ಬೆಳೆಗಳ ಉತ್ತಮ ಇಳುವರಿಗಾಗಿ ಮುಂದಿನ ದಿನಗಳಲ್ಲೂ ನಿರಂತರ ಹಾಗೂ ಸಮರ್ಪಕ ಮಳೆಯ ಅಗತ್ಯವಿದೆ. ಆದರೂ ಪುನರ್ವಸು ಮಳೆ ವಿಜಯಪುರ ಜಿಲ್ಲೆಯ ಕೃಷಿ ವಲಯದಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಈ ಬಾರಿಯ ಮುಂಗಾರು ಹಂಗಾಮಿನ ಭವಿಷ್ಯವನ್ನು ಮುಂದಿನ ಮಳೆಯೇ ನಿರ್ಧರಿಸಲಿದೆ.
ವಿಜಯಪುರ ಜಿಲ್ಲಾದ್ಯಂತ ಶನಿವಾರ ಸುರಿದ ಪುನರ್ವಸು ಮಳೆ, ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ಬಾಡುವ ಹಂತ ತಲುಪಿದ್ದ ಮುಂಗಾರು ಬೆಳೆಗಳಿಗೆ ಜೀವ ತುಂಬಿದಂತಾಗಿದೆ. ಮಳೆಯ ಕೊರತೆಯಿಂದ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ.
ಜೂನ್ ತಿಂಗಳ ಆರಂಭದಲ್ಲೇ ಮುಂಗಾರು ಪ್ರವೇಶಿಸಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆ ಅನುಭವಿಸಿದ್ದವು. ಅಲ್ಪ ಪ್ರಮಾಣದ ತೇವಾಂಶವನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ತೊಗರಿ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುವ ಹಂತ ತಲುಪಿದ್ದವು. ಆದರೆ ಶನಿವಾರ ಸುರಿದ ಮಳೆ ಹೊಲಗಳಲ್ಲಿ ಮತ್ತೆ ತೇವಾಂಶ ಹೆಚ್ಚಿಸಿ, ಬೆಳೆಗಳು ಚೇತರಿಸಿಕೊಳ್ಳುವ ವಿಶ್ವಾಸವನ್ನು ರೈತರಲ್ಲಿ ಮೂಡಿಸಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದ ಇದುವರೆಗೆ ಕೇವಲ 5.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಸುಮಾರು 2.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆ ಬಾಕಿಯಿದೆ. ಮಳೆ ಕೈಕೊಟ್ಟ ಕಾರಣ ಕೆಲ ರೈತರು ಈಗಾಗಲೇ ಒಣಗಿದ್ದ ಬೆಳೆಗಳನ್ನು ಕಿತ್ತುಹಾಕಿ ಮರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.
ಶನಿವಾರ ಸುರಿದ ಮಳೆ ವಿಜಯಪುರ ನಗರ ಸೇರಿದಂತೆ ಬಸವನಬಾಗೇವಾಡಿ, ಇಂಡಿ, ತಾಳಿಕೋಟೆ, ಹೂವಿನಹಿಪ್ಪರಗಿ, ಚಡಚಣ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಪ್ರಮಾಣದಲ್ಲಿ ದಾಖಲಾಗಿದೆ. ಮಳೆಯಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಬಿತ್ತನೆ ಬಾಕಿ ಉಳಿದಿರುವ ಜಮೀನುಗಳಲ್ಲಿ ಮತ್ತೆ ಕೃಷಿ ಕಾರ್ಯ ಆರಂಭಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಜುಲೈ ಅಂತ್ಯದವರೆಗೆ ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಈರುಳ್ಳಿ ಬಿತ್ತನೆಗೆ ಅವಕಾಶವಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾದರೆ ಬಿತ್ತನೆ ಬಾಕಿ ಉಳಿದಿರುವ ಪ್ರದೇಶಗಳಲ್ಲಿ ರೈತರು ವೇಗವಾಗಿ ಕೃಷಿ ಕಾರ್ಯ ಕೈಗೊಳ್ಳುವ ಸಾಧ್ಯತೆ ಇದೆ.
ಇನ್ನೊಂದೆಡೆ, ಜಿಲ್ಲೆಯಲ್ಲಿ ಜೂನ್ ತಿಂಗಳಿಂದ ಈವರೆಗೆ ಶೇ.28ರಷ್ಟು ಮಳೆ ಕೊರತೆ ದಾಖಲಾಗಿರುವುದು ಆತಂಕದ ವಿಷಯವಾಗಿದೆ. ಮಳೆ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿತ್ತು. ಇದೀಗ ಸುರಿದ ಮಳೆ ಕೃಷಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ನೆಮ್ಮದಿ ತಂದಿದೆ.
ಇದನ್ನೂ ಓದಿದ್ದೀರಾ? ತುಮಕೂರು | ಎಲ್ ನಿನೋ ಎಫೆಕ್ಟ್‌ನಿಂದ ಮುಂಗಾರು ವಿಫಲ: ಪರ್ಯಾಯ ಬೆಳೆ ಬಿತ್ತನೆಗೆ ಕೃಷಿ ಇಲಾಖೆ ಸಲಹೆ
“ಜುಲೈ ಅಂತ್ಯದವರೆಗೆ ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಈರುಳ್ಳಿ ಬಿತ್ತನೆಗೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರು ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಬಿತ್ತನೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ” ಎಂದು ವಿಜಯಪುರ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
ಹಿರಿಯ ರೈತರ ಅಭಿಪ್ರಾಯದಂತೆ, ಈ ಒಂದು ಮಳಯ ಮಾತ್ರಕ್ಕೆ ಸಂಪೂರ್ಣ ನಿರಾಳವಾಗಲು ಸಾಧ್ಯವಿಲ್ಲ. ಉತ್ತಮ ಇಳುವರಿಗಾಗಿ ಮುಂದಿನ ದಿನಗಳಲ್ಲೂ ನಿರಂತರ ಹಾಗೂ ಸಮರ್ಪಕ ಮಳೆಯ ಅಗತ್ಯವಿದೆ. ಆದರೂ ಪುನರ್ವಸು ಮಳೆ ವಿಜಯಪುರ ಜಿಲ್ಲೆಯ ಕೃಷಿ ವಲಯದಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಈ ಬಾರಿಯ ಮುಂಗಾರು ಹಂಗಾಮಿನ ಭವಿಷ್ಯವನ್ನು ಮುಂದಿನ ಮಳೆಯೇ ನಿರ್ಧರಿಸಲಿದೆ.





