ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಧಿಕೃತ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ದೈಹಿಕ ಬದಲಾವಣೆ ಅಭಿಮಾನಿಗಳ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಟನ ಆರೋಗ್ಯದ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.
ಶುಕ್ರವಾರ ಮುಂಬೈನ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ (SRA) ಕಚೇರಿಗೆ ಭೇಟಿ ನೀಡಿದ್ದ ಸಲ್ಮಾನ್, ಪ್ರಾಧಿಕಾರದ ನೂತನ ದತ್ತಾಂಶ ಸಂಗ್ರಹಣೆ ಮತ್ತು ಪರಿಶೀಲನಾ ಬೆಂಬಲ ಕೇಂದ್ರವನ್ನು (ಐಟಿ ಸರ್ವರ್ ರೂಂ) ಉದ್ಘಾಟಿಸಿದರು. ಇದೇ ವೇಳೆ 60 ವರ್ಷದ ನಟ, ಕಾರ್ಯಕ್ರಮದ ಫಲಾನುಭವಿಗಳಿಗೆ ಮನೆಗಳ ಕೀಗಳನ್ನು ಹಸ್ತಾಂತರಿಸಿದರು. ಆದರೆ, ಈ ಉದ್ಘಾಟನಾ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಸಲ್ಮಾನ್ ಅವರ ದೈಹಿಕ ರೂಪವೇ ಆನ್‌ಲೈನ್‌ನಲ್ಲಿ ಹೆಚ್ಚು ಚರ್ಚೆಗೀಡಾಗಿದೆ.
ಕಾರ್ಯಕ್ರಮದ ವಿಡಿಯೊ ಹಾಗೂ ಫೋಟೊಗಳನ್ನು ಕಂಡು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. “ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದೆ. ದೇವರು ಒಳ್ಳೆಯದು ಮಾಡಲಿ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. “ನನ್ನ ನೆಚ್ಚಿನ ಹೀರೊಗೆ ವಯಸ್ಸಾಗುತ್ತಿದೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ಭಾಯ್‌ಗೆ ಏನಾಗಿದೆ?, ಅವರಿಗೆ ಏನೋ ಗಂಭೀರ ಸಮಸ್ಯೆಯಾಗಿರುವಂತಿದೆ” ಎಂದೆಲ್ಲಾ ಜನರು ಕಾಳಜಿ ವ್ಯಕ್ತಪಡಿಸಿದ್ದಾರೆ. ತಮಗಾಗುತ್ತಿರುವ ಬೇಸರವನ್ನು ಹಂಚಿಕೊಂಡಿರುವ ಇನ್ನೊಬ್ಬರು “ಅವರಿಗೆ ವಯಸ್ಸಾಗುತ್ತಿರುವುದನ್ನು ನೋಡಲು ಇಷ್ಟವಿಲ್ಲ” ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, “ಅವರಿಗೆ ಸರಿಸುಮಾರು 65 ವರ್ಷ. ಆದರೆ ಪರವಾಗಿಲ್ಲ, ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ. ನಾವು ಈಗಲೂ ಭಾಯ್ ಅವರನ್ನು ಪ್ರೀತಿಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಸಿನಿಮಾ ರಂಗದ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಇತ್ತೀಚೆಗೆ ‘ರಾಜಾ ಶಿವಾಜಿ’ ಚಿತ್ರದಲ್ಲಿ ಜೀವಾ ಮಹಾಲಾ ಎಂಬ ಅತಿಥಿ ಪಾತ್ರದಲ್ಲಿ (ಕ್ಯಾಮಿಯೊ) ಕಾಣಿಸಿಕೊಂಡಿದ್ದರು. ರಿತೇಶ್ ದೇಶ್‌ಮುಖ್ ನಿರ್ದೇಶನದ ಈ ಚಿತ್ರದಲ್ಲಿ ಜೆನಿಲಿಯಾ ಡಿಸೋಜಾ, ಅಭಿಷೇಕ್ ಬಚ್ಚನ್, ಸಂಜಯ್ ದತ್ ಮತ್ತು ವಿದ್ಯಾ ಬಾಲನ್ ಕೂಡ ನಟಿಸಿದ್ದು, ಪ್ರಸ್ತುತ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್, ಅಪೂರ್ವ ಲಾಖಿಯಾ ನಿರ್ದೇಶನದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ (ಈ ಹಿಂದೆ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಸಲಾಗಿತ್ತು) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್, ಮುಖೇಶ್ ರಿಷಿ ಮತ್ತು ಅಂಕುರ್ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.





