ಕೊಳಗೇರಿ ಅಭಿವೃದ್ಧಿ ಮಂಡಳಿ ಎ ಇ ಇ ಬೇಜವಾಬ್ದಾರಿ ವರ್ತನೆ ಖಂಡಿಸಿ ದಲಿತ ಸ್ವರಾಜ್ಯ ಸೇನೆ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘಟನೆ ಮುಖಂಡ ಗೌಡಪ್ಪ ಬಡಿಗೇರ ಮಾತನಾಡಿ, “ಮಂಡಳಿ ಎಇಇ ಶಿವಾನಂದ ರಾಥೋಡ್ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳಾವುದಕ್ಕೂ ಸ್ಪಂದಿಸುತ್ತಿಲ್ಲ. ಬೇಸಿಗೆ ಇರುವುದರಿಂದ ಸ್ಲಂಗಳಿಗೆ ಕುಡಿಯುವ ನೀರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕಣಕಿ ಬಜಾರ್, ಕುಂಬಾರಗಲ್ಲಿ ಪ್ರದೇಶಗಳು ಮನುಷ್ಯ ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಇವುಗಳನ್ನು ಕೂಡಲೇ ಸ್ಥಳಾಂತರ ಕೊಳಚೆ ಪ್ರದೇಶಗಳೆಂದು ಘೋಷಣೆ ಹೊರಡಿಸಲು ಮನವಿ ಸಲ್ಲಿಸಿ ವರ್ಷ ಕಳೆದಿದೆ. ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ. ಇಂದಿನ ಸಭೆಯ ಹಾಗೆ ಸಮಸ್ಯೆಗೆ ಪರಿಹಾರ ಕೇಳಿದಾಗ ನಿರಾಸಕ್ತಿಯ ನಡೆ ತಾಳುತ್ತಾರೆ. ಹರಣ ಶಿಕಾರಿ ಸ್ಲಂ, ಭಾರತ್ ನಗರ, ಶಿಖರಖಾನೆ, ಮದ್ದಿನ ಕಣಿ ಸ್ಲಂಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸದ ಸ್ಲಂ ಬೋರ್ಡ್ ಎ ಇ ಇ ಅವರನ್ನು ಸೇವಾಸಮರ್ಥ ಆಧಾರದಡಿ ಜಿಲ್ಲಾಡಳಿತ ಅಮಾನತುಗೊಳಿಸಬೇಕು” ಎಂದು ಒತ್ತಾಯಿಸಿದರು.
ಅಕ್ಷಯ್ ಕುಮಾರ್ ಅಮೃತ್ ಮಾತನಾಡಿ, “ಸಮಸ್ಯೆ ಹೇಳಿಕೊಂಡು ಕೊಳಚೆ ಮಂಡಳಿ ಕಚೇರಿಗೆ ಬರುವ ಕೊಳಚೆ ಪ್ರದೇಶಗಳಲ್ಲಿನ ಕುಟುಂಬಗಳೊಂದಿಗೆ ಅಧಿಕಾರಿಗಳು ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಇಂಡಿ ರೋಡ್ ನಲ್ಲಿರುವ ಮಂಡಳಿಯ ಮನೆಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಟೆಂಡರುದಾರರ ಮೇಲೆ ಕ್ರಮಕ್ಕೆ ವರದಿ ಸಲ್ಲಿಸಲು ಹಾಗೂ ಸದರಿ ಮನೆಗಳಿಗೆ ಕುಡಿಯುವ ನೀರು ಒದಗಿಸಿ ಕಿಟಕಿ ಬಾಗಿಲುಗಳನ್ನು ದುರಸ್ತಿಗೊಳಿಸಿ ಕೊಡುವಂತೆ ಒತ್ತಾಯಿಸಲಾಗಿದೆ. ಆದರೆ ಅಧಿಕಾರಿಗಳು ದಿನವೂ ಒಂದೊಂದು ನೆಪ ಹೇಳುತ್ತಿದ್ದಾರೆ. ಶೀಘ್ರವೇ ಜಿಲ್ಲಾಧಿಕಾರಿಗಳು ಇಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮೂಲ ಸೌಲಭ್ಯ ವಂಚಿತ ಕೊಳಗೇರಿ ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಅಹೋರಾತ್ರಿ ಧರಣಿ ಮಾಡಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ | 176 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಕಾರ್ಯ: ಉಸ್ತುವಾರಿ ಸಚಿವ ಎಂ ಬಿ ಪಾಟೀಲ್
ಪ್ರಶಾಂತ್ ಗದ್ದರಿಗಿ, ಪರಶುರಾಮ್, ಪ್ರಕಾಶ ಶಬರದ್, ತಿಪ್ಪಣ್ಣ, ಕಿರಣ್ ಕುಮಾರ್, ಶರಣು, ಸುನಿಲ್ ಕುಮಾರ್, ಮಂಜುನಾಥ್ ಕವಳೆ, ಅಶೋಕ್ ಪಾಟೀಲ್, ಹುಲಗಪ್ಪ, ವಿರೇಶ್ ಇತರರಿದ್ದರು.





