ಕಿತ್ತೂರು ರಾಣಿ ಚನ್ನಮ್ಮ ಹಾಗೂ ವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ನಮಗೆಲ್ಲರಿಗೂ ಸ್ಪೂರ್ತಿ. ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ತಾಯ್ನಾಡಿಗಾಗಿ ಹೋರಾಡಿ ಇತಿಹಾಸ ಪುರುಷರಾಗಿ ಅಜರಾಮರಾಗಿದ್ದಾರೆ ಎಂದು ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆ, ತಾಲೂಕು ಹಾಗೂ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರ ಸಂಸ್ಥಾನದ ಕೊಡುಗೆ ಕುರಿತು ನಡೆದ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
“ಇಂದಿನ ಯುವಜನರು ಮತ್ತು ಮಕ್ಕಳು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನ ಹಾಗೂ ಸಾಹಸ ಗುಣಗಳನ್ನು ಅಳವಡಿಸಿಕೊಳ್ಳಬೇಕು” ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೋಲೀಸ ವರಿಷ್ಠಾಧಿಕಾರಿ ಸುಭಾಷ ಗುಡಿಮನಿ ಮಾತನಾಡಿ, “ದೇಶದಲ್ಲಿ ಇತಿಹಾಸ ಸೃಷ್ಟಿಸಿದ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನಕ್ಕೆ ದೇಶಾಭಿಮಾನಿಗಳು ಪ್ರೇರಣೆಗೊಂಡಿದ್ದಾರೆ. ನಮ್ಮ ನಾಡಿನ ಉಳಿವಿಗಾಗಿ ಅವರ ತ್ಯಾಗ ಅಮರ. ಚನ್ನಮ್ಮ ಬಾಲ್ಯದಲ್ಲಿಯೇ ಯುದ್ಧದ ಕಲೆಗಳನ್ನು ಕರಗತಮಾಡಿಕೊಂಡಿದ್ದರೆ, ಸಂಗೊಳ್ಳಿ ರಾಯಣ್ಣ ಹುಟ್ಟಿನಿಂದಲೇ ಸಾಹಸಿಯಾಗಿದ್ದರು. ಹಾಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಶೂರ ಎನಿಸಿಕೊಂಡರು” ಎಂದರು.
ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮ ಹೋರಾಟದ ಕುರಿತು ಉಪನ್ಯಾಸ ನೀಡಿದ ಪ್ರತಿಭಾ ಪಾಟಿಲ್ ಮಾತನಾಡಿ, “ದತ್ತು ಪುತ್ರ ನಿರಾಕರಣೆ ಮಾಡಿದ ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದ ಕಿತ್ತೂರು ಸಂಸ್ಥಾನ ದೇಶದಲ್ಲಿಯೇ ಮೊದಲಿನದು. ರಾಜ್ಯ ನನ್ನದು, ರಾಜ್ಯ ನೀತಿಗಳು ನಮ್ಮವು ಅದನ್ನು ಪ್ರಶ್ನಿಸಲು ನೀನಾರು? ಎಂದು ಕಿತ್ತೂರು ಸಂಸ್ಥಾನ ಕಪ್ಪ ಕೊಡುವುದನ್ನು ನಿರಾಕರಿಸುತ್ತದೆ. ಬ್ರಿಟಿಷರ ಮೂರು ಸಾವಿರ ಸೈನಿಕರ ಎದುರು ಚನ್ನಮ್ಮಳ ಎರಡು ನೂರು ಸೈನಿಕರು ಬ್ರಿಟಿಷರನ್ನು ಸದೆಬಡಿದರು” ಎಂದು ಹೇಳಿದರು.
ಶರಣ ಚಿಂತಕ ಮೌನೇಶ್ವರ ಮೇಟಿ ಕಿತ್ತೂರು ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಕುರಿತು ಉಪನ್ಯಾಸ ನೀಡುತ್ತಾ, “ಬ್ರಿಟಿಷರನ್ನು ಸೋಲಿಸಿದ ಕೀರ್ತಿ ಚನ್ನಮ್ಮಳಿಗೆ ಸಲ್ಲುತ್ತದೆ. 1857ರ ಸಿಪಾಯಿ ದಂಗೆಗೂ ಮೊದಲು ಕಿತ್ತೂರಿನಲ್ಲಿ ಹೋರಾಟ ಪ್ರಾರಂಭವಾಗಿತ್ತು. ಬ್ರಿಟಿಷರು ಕೇಳಿದ ಕಪ್ಪ ಕಾಣಿಕೆಯನ್ನು ನೀಡುವುದನ್ನು ನಿರಾಕರಿಸಿದರು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಗ್ರಾಮೀಣ ಸೊಗಡಿನ ರಂಗಕಲೆ ಮುಖ್ಯವಾಹಿನಿಗೆ ಬರಲಿ: ಗ್ರಾ.ಪಂ ಸದಸ್ಯ ವೆಂಕಟರಂಗಯ್ಯ
ಪ ಪೂ ಕವಲಗಿ ಇಂಡಿ ಮಠದ ರೂಪಾನಂದ ಮಹಾಸ್ವಾಮಿ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಂತ ಉತ್ತಮ ಉಪನ್ಯಾಸ ಕಾರ್ಯಕ್ರಮ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಬೆಳೆಸುವತ್ತ ಗಮನ ನೀಡಬೇಕು” ಎಂದು ಕೋರಿದರು.
ವೇದಿಕೆಯ ಮೇಲೆ ಕಾಶಿಮ್ ಪಟೇಲ, ಪಾಟೀಲ ಸುನಂದಾ ವಾಲಿಕಾರ, ಅನಸೂಯ ಜಾಧವ, ಮಲ್ಲಪ್ಪ ನ್ಯಾಮನ್ನವರ, ಲಲಿತಾ ಬಿರಾದಾರ, ಅಭಿಷೇಕ ಚಕ್ರವರ್ತಿ, ಸಿದ್ರಾಮಯ್ಯ ಲಕ್ಕುಂಡಿಮಠ, ಅಬ್ದುಲ್ ರಜಾಕ ಮುಲ್ಲಾ, ರಾಜೇಸಾಬ ಶಿವನಗುತ್ತಿ, ಅರ್ಜುನ ಶಿರೂರ, ಸುನಂದಾ ಕೋರಿ, ಶೋಭಾ ಹರಿಜನ,
ಎಸ್ ಎಲ್ ಇಂಗಳೇಶ್ವರ, ಕೆ ಸುನಂದಾ ಸೇರಿದಂತೆ ಬಹತೇಕರು ಇದ್ದರು.