ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಅಭಿವೃದ್ಧಿ ದೃಷ್ಟಿಯಿಂದಲೂ ಹಿಂದೆ ಇವೆ. ಡಾ. ಡಿ.ಎಂ ನಂಜುಂಡಪ್ಪನವರ ಸಮಿತಿಯು ಅಭಿವೃದ್ಧಿ ಹೊಂದದ 21 ತಾಲೂಕುಗಳಲ್ಲಿ 18 ತಾಲೂಕುಗಳು ಮುಂಬೈ ಕರ್ನಾಟಕದ ಭಾಗದಲ್ಲಿವೆ. ಅದರಲ್ಲಿ ವಿಜಯಪುರವೂ ಒಂದು. ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೊಟ್ಟೆಪಾಡಿಗೆಂದು ಬದುಕು ಹರಸಿ ವಲಸೆ ಹೋಗುವುದು ಸಾಮಾನ್ಯವಾಗಿದೆ.
ಆರ್ಥಿಕ ಅಸಮಾನತೆ, ಬಡತನ ನಿರುದ್ಯೋಗ ಇತ್ಯಾದಿ ಕಾರಣದಿಂದ ವರ್ಷದ ಆರೇಳು ತಿಂಗಳು ಕಾಲ ವಲಸೆ ಹೋಗುವರು. ಮಕ್ಕಳ ಶಾಲೆ ಕೂಡ “ಆರು ತಿಂಗಳು ಶಾಲೆ ಇನ್ನು ಆರು ತಿಂಗಳು ತಂದೆತಾಯಿ ಜೊತೆಗೆ ದುಡಿಮೆಗೆ” ಎನ್ನುವಂತಾಗಿದೆ. ಇದು ಈ ಭಾಗದ ಮಕ್ಕಳ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರುವಂತದ್ದಾಗಿದೆ.
ಬಡತನ ಹಾಗೂ ಸಾಲದ ಭಾದೆಗಳಿಂದಾಗಿ ಎಷ್ಟೋ ಮಕ್ಕಳು ಶಾಲೆ ಬಿಟ್ಟು ಕಾರ್ಮಿಕರಾಗಿದ್ದಾರೆ ಮತ್ತು ಬಾಲಕಾರ್ಮಿಕರಾಗಿದ್ದಾರೆ. ಶಾಲೆ ಬಿಡಿಸಿ ತಂದೆ ತಾಯಿ ತಮ್ಮ ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಪಾಲಕರ ಜೊತೆ ಕಬ್ಬು ಕಡಿಯುವುದು, ಇಟ್ಟಿಗೆ ತಯಾರಿಸುವಂತಹ ಕೆಲಸಗಳಲ್ಲಿ ತೊಡಗುತ್ತಾರೆ. ಹೆಣ್ಣು ಮಕ್ಕಳು ತಮ್ಮ ತಾಯಂದಿರ ಜೊತೆಗೆ ಮನೆ ಕೆಲಸಗಳನ್ನು ಮಾಡುವುದರ ಜೊತೆಗೆ ತನ್ನ ತಂಗಿನೊ ಅಥವಾ ತಮ್ಮನೋ ಇದ್ದರೆ ಅವಳ ತಾಯಿ ಬರುವವರೆಗೂ ಆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಆ ಮಗುವಿನದಾಗಿರುತ್ತದೆ.
ಕೊರೊನಾ ನಂತರದ ದಿನಗಳಲ್ಲಿ ವಲಸೆ ಹೋಗಿ ಬಂದಂತಹ ಕುಟುಂಬಗಳೊಂದಿಗೆ ಚರ್ಚಿಸಿ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮತ್ತು ಕಲಿಕೆಯಲ್ಲಿ ಹಿಂದುಳಿದಂತಹ ಮಕ್ಕಳನ್ನು ಸೇರಿಸಿ ಟ್ಯೂಷನ್ ನೀಡಬಹುದೆಂದು ಆಲೋಚಿಸಲಾಯಿತು. ಬಳಿಕ ಚರ್ಚಿಸಿ ಮೊದಲು 2021ರ ಏಪ್ರಿಲ್ 14ರಂದು ಡಾ. ಬಿ ಆರ್ ಅಂಬೇಡ್ಕರ್ ಜಯಂತ್ಯೋತ್ಸವ ದಿನದಂದು ಕಲಿಕಾ ಕೇಂದ್ರವನ್ನು ಇಂಡಿ ತಾಲೂಕಿನ ಭೈರುಣಗಿ ಗ್ರಾಮದಲ್ಲಿ ಪ್ರಾರಂಭಿಸಲಾಯಿತು. ನಂತರ ಅದೇ ಜುಲೈ 7ರಂದು ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಪ್ರಾರಂಭಿಸಲಾಯಿತು. 2023ರ ಜನವರಿ 3ರಂದು ಸಾವಿತ್ರಿ ಬಾಯಿ ಫುಲೆ ಜನ್ಮದಿನದಂದು ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಪ್ರಾರಂಭಿಸಲಾಯಿತು. ಅದೇ ಜೂನ್‌ನಲ್ಲಿ ಬಬಲಾದ ಗ್ರಾಮದಲ್ಲಿ ಪ್ರಾರಂಭಿಸಲಾಯಿತು. ಎಲ್ಲ ಕಲಿಕಾ ಕೇಂದ್ರದಿಂದ ಒಟ್ಟು 300 ಮಂದಿ ಮಕ್ಕಳಿದ್ದಾರೆ.
ಈ ಮಕ್ಕಳ ಬಗ್ಗೆ ಕಾಳಜಿ ಇರುವಂತಹ, ಸಮಾಜದ ಬಗ್ಗೆ ಒಳ್ಳೆಯ ದೃಷ್ಟಿಕೋನ ಇರುವಂತಹ ಅದೇ ಸಮುದಾಯದ ಡಿಗ್ರಿ ಮುಗಿಸಿಕೊಂಡಿರುವಂತಹ ಸ್ಥಳೀಯ ಶಿಕ್ಷಕಿಯರನ್ನು ಪಾಠ ಹೇಳಲು ನೇಮಿಸಿಕೊಳ್ಳಲಾಯಿತು. ಈ ಶಿಕ್ಷಕರು ಕೆಲವು ಸಲ ಮಕ್ಕಳಿಗೆ ಊರಿಂದ ಆಚೆಗಿನ ಬೆಟ್ಟ-ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಾರೆ. ಆಟದ ಜೊತೆಗೆ ಮಕ್ಕಳಿಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತಿದ್ದಾರೆ.
ಬೇಸಿಗೆಯಲ್ಲಿ ಒಂದು ವಾರ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಗಿಡ ನೆಡಿಸುವುದು, ಸುತ್ತಮುತ್ತ ಪರಿಸರ ಸ್ವಚ್ಛಗೊಳಿಸುವುದು, ಹಾಡು, ನೃತ್ಯ, ನಾಟಕ, ಸ್ಪೆಲಿಂಗ್ ಮ್ಯಾಚ್, ಚಿತ್ರಕಲೆ, ರಸಪ್ರಶ್ನೆ ಇಡಲಾಗಿತ್ತು. ಬಹಳ ಆಸಕ್ತಿಯಿಂದ ಭಾಗವಹಿಸುವಿಕೆ ಇತ್ತು.
ಈಗ ನಾಲ್ಕು ಗ್ರಾಮಗಳಲ್ಲಿ ಸಾವಿತ್ರಿಬಾಯಿ ಫುಲೆ ಕಲಿಕಾ ಕೇಂದ್ರಗಳಿವೆ. ವಿಶೇಷವೆಂದರೆ ಈ ಕಲಿಕಾ ಕೇಂದ್ರಗಳನ್ನು ಡಾ. ಬಿ. ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ. ಎಷ್ಟೋ ದಿನಗಳಿಂದ ಖಾಲಿಯಾಗಿಯೇ ಇದ್ದ ಭವನಕ್ಕೆ ಮಕ್ಕಳಿಂದ ಚೈತನ್ಯ ಬಂದಿದೆ. ಈ ಕೇಂದ್ರಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಸಾಯಂಕಾಲ ತಮ್ಮ ಶಾಲೆ ಬಿಟ್ಟ ಬಳಿಕ ಸಂಜೆ 5-30ರಿಂದ 7-30ರವರೆಗೂ ಇರುತ್ತಾರೆ. ಕಲಿಕೆಯಲ್ಲಿ ಹಿಂದುಳಿದಿರುವಂತಹ ಮಕ್ಕಳಿಗೆ ಆದ್ಯತೆ ಕೊಡುತ್ತ ಉಳಿದ ಮಕ್ಕಳೊಂದಿಗೆ ಓದು ಬರಹದಲ್ಲಿ ತೊಡುಗುವಂತೆ ಮಾಡುವುದರೊಂದಿಗೆ ಸರ್ಕಾರಿ ಶಾಲೆಗಳೊಂದಿಗೆ ನೆಟ್ವರ್ಕ್ ಬಿಲ್ಡ್ ಮಾಡುವುದಾಗಿದೆ. ಪ್ರತಿದಿನ ಮಕ್ಕಳಿಗೆ ಒಂದು ಗಂಟೆ ಶಾಲೆಯಲ್ಲಿ ಕೊಟ್ಟ ಹೋಮ್ ವರ್ಕ್ ಮಾಡಿಸಿ, ಇನ್ನು ಒಂದು ಗಂಟೆ ಕಲಿಕೇತರ ಚಟುವಟಿಕೆ ಮಾಡಿಸುವುದಾಗಿದೆ.
ಮಕ್ಕಳಿಗೆ ಸಂವಿಧಾನ ಆಶಯಗಳನ್ನು ತಿಳಿಸುವುದು, ಮಕ್ಕಳಲ್ಲಿ ಸಂವಿಧಾನ ಮೌಲ್ಯಗಳನ್ನು ಬೆಳೆಸುವುದು, ಪ್ರಶ್ನೆ ಮಾಡುವ ಮನೋಭಾವನೆ ಇತ್ಯಾದಿಗಳನ್ನು ಮಕ್ಕಳಿಗೆ ಕಲುಹಿಸಲಾಗುತ್ತಿದೆ. ಸಂತೋಷಕರ ವಿಷಯವೆಂದರೆ ನಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಧೈರ್ಯವಾಗಿ ಭಾಗವಹಿಸುತ್ತಾರೆ. ಮಕ್ಕಳು ಹೇಗೆ ಓದುತ್ತಿದ್ದಾರೆ ಸಮುದಾಯದ ಮಹಿಳೆಯರು ಶಾಲೆ ಬಳಿ ಬಂದು ನೋಡುತ್ತಾರೆ. ಶಿಕ್ಷಕಿಯರು, ಮಕ್ಕಳು, ಮಹಿಳೆಯರು ಎಲ್ಲರೂ ಸೇರಿಯೇ ಭವನ ಸ್ವಚ್ಛಗೊಳಿಸುತ್ತಾರೆ. ರಂಗೋಲಿ ಹಾಕಿಕೊಂಡು ಅಂದವಾಗಿ ಇಟ್ಟುಕೊಂಡಿದ್ದಾರೆ. ಸಂವಿಧಾನದ ದಿನ, ಅಂಬೇಡ್ಕರ್ ಜಯಂತಿ, ಸಾವಿತ್ರಿಬಾಯಿ ಫುಲೆ ಜಯಂತಿ ರಾಷ್ಟೀಯ ಹಬ್ಬಗಳಲ್ಲಿ ಮಕ್ಕಳು ಮಹಿಳೆಯರೆಲ್ಲರೂ ಸೇರಿ ಆಚರಿಸುತ್ತಾರೆ. ಇದರ ಹಿಂದೆಯಿಂದ ಸಾಕಷ್ಟು ಜನ ಸಹಾಯ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಹಾಮೇಳಾವ್‌ಗೆ ಅನುಮತಿ ನಿರಾಕರಣೆ; 144 ಸೆಕ್ಷನ್ ಜಾರಿ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೊ.ಹೇಮಲತಾ ಅವರು ಕಲಿಕಾ ಕೇಂದ್ರ ಸಹಾಯವನ್ನು ನೀಡುತ್ತಿದ್ದಾರೆ. ಮೈಸೂರಿನ ಡಾ. ಜಿ ಸುಧಾ ಅವರು ಮಕ್ಕಳಿಗೆ ವಾರಕ್ಕೊಮ್ಮೆ ಮೊಟ್ಟೆ ಬಾಳೆಹಣ್ಣು ನೀಡುವುದರ ಜೊತೆಗೆ, ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಬೋರ್ಡ್ ಇತ್ಯಾದಿಗಳ ಸಹಾಯ ಮಾಡುತ್ತಿದ್ದಾರೆ.
ವರದಿ : ಡಾ. ಭುವನೇಶ್ವರಿ