ಜಾತಿ, ಧರ್ಮದ ಭೇದ ಮರೆತು ಒಗ್ಗಟ್ಟಿನಿಂದ ಬದುಕುವ ಸಂದೇಶ ಸಾರುವ ಮೂಲಕ ಸಂವಿಧಾನ ದಿನವನ್ನು ಪ್ರತಿಯೊಬ್ಬ ಭಾರತೀಯರೂ ಹಬ್ಬದಂತೆ ಆಚರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಹೇಳಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ (ರಿ.), ವಿಜಯಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ (ರಿ.), ವಿಜಯಪುರ ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ವಿಜಯಪುರ ನಗರದ ಬಾರಾಕಮಾನ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಉತ್ಸವ-2026’ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಅನೇಕ ಜಾತಿ, ಧರ್ಮಗಳ ಜನರು ಸಹಬಾಳ್ವೆ ನಡೆಸುವ ದೇಶ. ವಿವಿಧ ಧರ್ಮಗಳ ಜನರು ತಮ್ಮ ತಮ್ಮ ಹಬ್ಬಗಳನ್ನು ಆಚರಿಸುವಂತೆ, ನಾವೆಲ್ಲರೂ ಭಾರತೀಯರಾಗಿರುವ ಕಾರಣ ಸಂವಿಧಾನ ದಿನವನ್ನು ದೊಡ್ಡ ಹಬ್ಬವಾಗಿ ಆಚರಿಸಬೇಕು. ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಿದೆ. ಇಂತಹ ಮಹತ್ವದ ಸಂವಿಧಾನದ ಆಶಯಗಳನ್ನು ಗೌರವಿಸಿ, ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಾಪುರ ಜೆಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಸೊಸೈಟಿಯ ಮುಖ್ಯಸ್ಥ ಸುನೀಲ ಫರ್ನಾಂಡಿಸ್ ಮಾತನಾಡಿ, ನಗರದ ವಿವಿಧ ಸ್ಲಂಗಳ ನಿವಾಸಿಗಳು ಜಾತಿ, ಮತ, ಭೇದಭಾವಗಳನ್ನು ಮರೆತು ಒಂದಾಗಿ ಸಂವಿಧಾನ ಉತ್ಸವದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ ಎಂದರು.ವಿವಿಧ ಸ್ಲಂ ಪ್ರದೇಶಗಳಿಂದ ಬಂದವರು ತಮ್ಮ ಮನೆಗಳಿಂದ ಊಟದ ಬುತ್ತಿಗಳನ್ನು ತಂದು, ಪರಸ್ಪರ ಹಂಚಿಕೊಂಡು ಊಟ ಮಾಡುತ್ತಿರುವುದು ನಿಜವಾದ ಸಹಬಾಳ್ವೆ ಮತ್ತು ಸಂವಿಧಾನದ ಆಶಯಗಳ ಪ್ರತಿಬಿಂಬವಾಗಿದೆ.
ವಿಜಯಪುರ ನಗರದ ಸ್ಲಂಗಳಲ್ಲಿ ವಿವಿಧ ಜಾತಿ, ಧರ್ಮಗಳ ಜನರು ಒಟ್ಟಾಗಿ ಬದುಕುತ್ತಿದ್ದು, ಇಂತಹ ಒಗ್ಗಟ್ಟು ಹಾಗೂ ಸಹೋದರತ್ವವೇ ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿರಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಮಾತನಾಡಿ, ಕಾನೂನಾತ್ಮಕ ಸಮಸ್ಯೆಗಳು, ನ್ಯಾಯದ ಕುರಿತ ಸಲಹೆಗಳು ಅಥವಾ ಇತರೆ ತೊಂದರೆಗಳಿದ್ದರೆ ನ್ಯಾಯವಾದಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು. ನ್ಯಾಯವಾದಿಗಳನ್ನು ಭೇಟಿಯಾಗಲು ಅಗತ್ಯ ಸಹಾಯ ಹಾಗೂ ಸಹಕಾರ ನೀಡಲು ತಾವು ಸಿದ್ಧರಿರುವುದಾಗಿ ತಿಳಿಸಿದರು.
ಅತಿಥಿಗಳಾಗಿ ರಾಜ್ಯ ಸಮುದಾಯ ವ್ಯವಸ್ಥೆ ಬಲವರ್ಧನೆ ಅಧಿಕಾರಿ ಶಾನ್ ಸಿಹಿಮೊಗ್ಗೆ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಕೆವಿನ ಸಿಶ್ವರಾ ಹಾಗೂ ಸಹನಿರ್ದೇಶಕ ಸುಮನ ಬಾಲು ಪಾಲ್ಗೊಂಡಿದ್ದರು.
ಪಾರಿವಾಳಗಳನ್ನು ಸ್ವತಂತ್ರವಾಗಿ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ವಿವಿಧ ಸ್ಲಂ ಪ್ರದೇಶಗಳು ಹಾಗೂ ಸಹ ಸಂಘಟನೆಗಳಿಂದ 258 ಸದಸ್ಯರು ಉತ್ಸವದಲ್ಲಿ ಭಾಗವಹಿಸಿದ್ದರು.ಗೀತಾ ಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಿನಾಕ್ಷಿ ಸಿಂಗೆ ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.



