- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ಗೆ ಕರೆ
- ‘ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜೊತೆ ಮಾತನಾಡುತ್ತೇನೆ’
ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳ ಸಂಚಾರ ಇಲ್ಲ. ಅಂತಹ ಜೆಲ್ಲೆಗಳಲ್ಲಿ ಖಾಸಗಿ ಬಸ್ಗಳ ಸಂಚಾರ ಹೆಚ್ಚು ಇದೆ. ಇಂತಹ ಕಡೆಗಳಲ್ಲಿ ಏನಾದರೂ ಉಪಾಯ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ಗೆ ಕರೆ ನೀಡಿದ್ದು, ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಖಾಸಗಿ ಸಾರಿಗೆಯಲ್ಲಿ ಯಾರೂ ಹೋಗುತ್ತಿಲ್ಲ ಎಂಬುದು ಗೊತ್ತಾಗಿದೆ. ಇದಕ್ಕೆ ಒಂದು ಉಪಾಯ ಕಂಡು ಹಿಡಿಯಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುತ್ತೇನೆ” ಎಂದರು.
ಸಚಿವರ ವಿರುದ್ಧ ಕಾಂಗ್ರೆಸ್ನ ಕೆಲ ಶಾಸಕರ ಅಸಮಾಧಾನ ಹೊರಹಾಕಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಯಾವ ಶಾಸಕರೂ ಅಸಮಾಧಾನ ಹೊರಹಾಕಿಲ್ಲ. ಎಲ್ಲ ನೀವೇ ಕ್ರಿಯೆಟ್ ಮಾಡುತ್ತಿದ್ದೀರಿ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ಶಾಸಕರು ತಮ್ಮ ನೋವನ್ನು ತೋಡಿಕೊಳ್ಳಬಾರದಾ? ಅದರಲ್ಲಿ ತಪ್ಪೇನಿದೆ? ಯಾವ ತಪ್ಪೂ ಇಲ್ಲ” ಎಂದು ಹೇಳಿದರು.
ಆದಿತ್ಯ ಎಲ್-1 ಉಡ್ಡಯನಕ್ಕೆ ಶುಭ ಹಾರೈಕೆ
ಇಸ್ರೋದಿಂದ ಆದಿತ್ಯ ಎಲ್-1 ಉಡಾವಣೆ ಹಿನ್ನೆಲೆ ಇಸ್ರೋಗೆ ಡಿಕೆ ಶಿವಕುಮಾರ್ ಶುಭ ಹಾರೈಸಿದರು. “ಕರ್ನಾಟಕದಿಂದ ಭಾರತಕ್ಕೆ ಗೌರವ ತರುವ ಕೆಲಸ ನಮ್ಮ ಇಸ್ರೋ ಮಾಡುತ್ತಿದೆ. ದೊಡ್ಡ ಪ್ರಯೋಗ, ಪ್ರಯತ್ನ, ಸಾಹಸ ಎಲ್ಲವನ್ನೂ ಕೂಡ ಮಾಡುತ್ತಿದೆ. ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ” ಎಂದರು.