ವಾಟ್ಸಾಪ್ ಯುನಿವರ್ಸಿಟಿ ತಿರುಚಿದ ಇತಿಹಾಸ ಹೇಳುತ್ತಿದ್ದು, ಸುಳ್ಳನ್ನು ಸಾವಿರ ಬಾರಿ ಹೇಳುತ್ತ ಅದನ್ನೇ ಸತ್ಯವೆಂದು ನಂಬಿಸುತ್ತಿದೆ. ಇಂದಿನ ಯುವಕರ ತಿಳುವಳಿಕೆಯನ್ನು ದಾರಿ ತಪ್ಪಿಸುತ್ತಿದೆ. ಇದನ್ನು ಕಂಡು ನಮ್ಮಂಥವರಿಗೆ ಅಘಾತವಾಗಿದೆ ಎಂದು ಪ್ರೊ ಎಸ್ ಜಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಾಲೇಜು ಮಕ್ಕಳಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಕರ್ನಾಟಕ ಸಂಘ ಮಂಡ್ಯ, ಕೆಆರ್‌ಪೇಟೆ ಕೃಷ್ಣ ಪ್ರತಿಷ್ಠಾನ, ಉದಯರವಿ ಟ್ರಸ್ಟ್, ಲೋಕಾಯನ ಕಲ್ಚರಲ್ ಟ್ರಸ್ಟ್, ಕರ್ನಾಟಕ ರಾಜ್ಯ ರೈತ ಸಂಘ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಹಾಗೂ ಗ್ರಾಮ ಭಾರತಿ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ “ಮಹಾತ್ಮ ಗಾಂಧಿ ಬದುಕು ಮತ್ತು ಹೋರಾಟ” ಎರಡು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
“ಗಾಂಧಿ ಕಾಲ್ನಡಿಗೆ ಮೂಲಕ ಒಕ್ಕೂಟ ಸುತ್ತಿ ಪರಿಸ್ಥಿತಿಯನ್ನು ತಿಳಿದುಕೊಂಡರು. ಒಕ್ಕೂಟ ಪರ್ಯಟನೆಯ ನಂತರ ಸೂಟುಬೂಟಿನ ಬ್ಯಾರಿಸ್ಟರ್ ಗಾಂಧಿ, ಅರೆ ಬಟ್ಟೆಯ ಪಕೀರ ಗಾಂಧಿಯಾಗುತ್ತಾರೆ. ಜನರ ಬಡತನ ಸಂಕಟವನ್ನು ತಿಳಿದು, ಇದರ ನಿವಾರಣೆಯಾಗುವವರೆಗೆ ಮೈತುಂಬಾ ಬಟ್ಟೆ ತೊಡುವುದಿಲ್ಲವೆಂದು ತೀರ್ಮಾನಿಸುತ್ತಾರೆ” ಎಂದರು.
“ದಕ್ಷಿಣ ಆಫ್ರಿಕಾದಲ್ಲಿ ವರ್ಣ ದ್ವೇಷದಿಂದ ಗಾಂಧಿಯನ್ನು ರೈಲಿನಿಂದ ಬ್ರಿಟಿಷರು ಹೊರ ಹಾಕಿದರು. ದ್ವೇಷದ ಬದಲಾಗಿ ಪ್ರೀತಿಯಿಂದ ಹೋರಾಟ ಮಾಡಬೇಕೆಂದು ಗಾಂಧಿ ತೀರ್ಮಾನಿಸಿದ್ದರು. ರೈಲಿನಿಂದ ಹೊರಹಾಕಿದ ಜಾಗದಲ್ಲಿ ʼಸತ್ಯಾಗ್ರಹ ಹುಟ್ಟಿದ ಜಾಗʼವೆಂದು ಬರೆಸಿದ್ದಾರೆ” ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಸಂವಿಧಾನದ ಆಶಯದಂತೆ ಬದುಕಿದರೆ ಸಾರ್ಥಕ ಜೀವನ : ಜಿಲ್ಲಾಧಿಕಾರಿ ಡಾ.ಕುಮಾರ್
“ಯಾವ ಯಾವುದೋ ಶಾಖೆಗಳು ಇತಿಹಾಸವನ್ನು ತಿರುಚುತ್ತಿವೆ. ಯುವಕರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿವೆ. ಸತ್ಯ ವಿಚಾರವನ್ನು ತಿಳಿಸಿ ಮನುಷ್ಯರನ್ನಾಗಿ ರೂಪಿಸುವ ಕೆಲಸವನ್ನು ಈ ವಿಚಾರ ಸಂಕಿರಣ ಮಾಡಲೆಂದು ಆಶಿಸುತ್ತೇನೆ” ಎಂದು ಹೇಳಿದರು.
ಕರ್ನಾಟಕ ಸಂಘದ ಜಯಪ್ರಕಾಶ್‌ಗೌಡ ಆಶಯ ನುಡಿಯಾಡಿ, “ಯುವಕರಲ್ಲಿ ಗಾಂಧಿ ಚಿಂತನೆಗಳನ್ನು ಬಿತ್ತಬೇಕಿದ್ದ ಸಂಸ್ಥೆಗಳು ಗಾಂಧಿ ಭಜನೆಯಲ್ಲಿ ಮುಳುಗಿವೆ. ನಾವು ನಿಜ ಗಾಂಧಿಯನ್ನು ತಿಳಿದುಕೊಂಡಿಲ್ಲ, ಬದಲಾಗಿ ಗಾಂಧಿಯನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದೇವೆ. ಗಾಂಧಿಯನ್ನು ತಿಳಿದುಕೊಳ್ಳದೆ ಬರಿ ಜೈ ಜೈ ಅನ್ನುವವರು ಹೆಚ್ಚಾಗುತ್ತಿದ್ದಾರೆ. ಗಾಂಧಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು” ಎಂದು ಹೇಳಿದರು.
ಶಿವರಾಜ್ ಜಿ ಬಿ ಮಾತನಾಡಿ, “ಯುವಕರು ಸರಿದಾರಿಯಲ್ಲಿದ್ದಾರೆ. ಅವರಿಗೆ ಗಾಂಧಿಯನ್ನು ತಿಳಿಸದಿದ್ದದ್ದು ನಮ್ಮ ತಪ್ಪು. ಅವರಲ್ಲಿ ಆಸಕ್ತಿಯನ್ನು ಮೂಡಿಸದಿದ್ದದ್ದು ನಮ್ಮ ತಪ್ಪು. ನಾವು ಗಾಂಧಿ ತತ್ವವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಡಿಕ್ಕಿ ಹೊಡೆಸುವ ಬದಲು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದರು.

ವೂಡೆ ಪಿ ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಾವು ಒಂದು ವಿಷಮ ಸ್ಥಿತಿಯಲ್ಲಿದ್ದೇವೆ. ಸಾಮಾಜಿಕ ಮಾಧ್ಯಮದ ವಿಷಜಾಲದಲ್ಲಿ ಸಿಲುಕಿಕೊಂಡಿದ್ದೇವೆ. ಅದು ಗಾಂಧಿಯನ್ನು ತಪ್ಪಾಗಿ ಬಿಂಬಿಸುತ್ತಿದೆ. ಸ್ಥಿತಿವಂತ ಕುಟುಂಬದಿಂದ ಬಂದ ಗಾಂಧಿ ಬಡವರ ಜೊತೆ ಗುರುತಿಸಿಕೊಂಡರು. ಸಾಮಾನ್ಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗುವಂತೆ ಮಾಡಿದರು. ಇವತ್ತಿನ ವಿಷಮ ಪರಿಸ್ಥಿತಿಗೆ ಗಾಂಧಿ ಮಾರ್ಗವೇ ಪರಿಹಾರ. ಪ್ರಪಂಚದ ನಾಯಕರೆಲ್ಲ ಗಾಂಧಿಯೆಡೆಗೆ ನೋಡುತ್ತಿದ್ದಾರೆ” ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ರೈತ ಸಂಘದ ಎಂ ವಿ ರಾಜೇಗೌಡ, ಜಯರಾಮ್, ನಂದಿನಿ ಜಯರಾಮ್, ಡಿಎಸ್ಎಸ್‌ನ ಬಸ್ತಿ ರಂಗಪ್ಪ, ಕತ್ತರಘಟ್ಟ ವಾಸು, ಸೋಮಶೇಖರ್, ಕೆವಿಎಸ್‌ನ ವೆಂಕಟೇಶ್, ಪ್ರಮೋದ್, ಮಹಮ್ಮದ್ ಅಜರುದ್ಧೀನ್, ರೈತ ಸಂಘದ ಕೇಶವಮೂರ್ತಿ, ತಾಲೂಕಿನ ಎಲ್ಲ ಕಾಲೇಜಿನ ಉಪನ್ಯಾಸಕರು ಮತ್ತು ವಿಧ್ಯಾರ್ಥಿಗಳು ಸೇರಿದಂತೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಇದ್ದರು.