ಹಿಜಾಬ್ ತೆಗೆಸಬೇಕು ಎಂದವರು ಜನಿವಾರ ತೆಗೆಸಿದಾಗ ಯಾಕೆ ಗಲಾಟೆ ಮಾಡುತ್ತಾರೆ? ಎಂದು ಹೖಕೋರ್ಟ್ ವಕೀಲೆ ರಾಜಲಕ್ಷ್ಮೀ ಅಂಕಲಗಿ ಪ್ರಶ್ನಿಸಿದರು.
ತುಮಕೂರು ವಿವಿಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತಿಪಟೂರಿನ ಜನಸ್ಪಂದನ ಟ್ರಸ್ಟ್ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಆಯೋಜಿಸಿರುವ “ಸಂವಿಧಾನ ಅರಿವು” ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಕಾನೂನಿನ ದೃಷ್ಠಿಯಲ್ಲಿ ಎಲ್ಲರೂ ಸಮಾನರು. ನೋ ಡಿಸ್ಕ್ರಿಮಿನೇಷನ್, ರಿಸರ್ವೇಷನ್, ಮಹಿಳಾ ಮೀಸಲಾತಿ ಸೇರಿದಂತೆ ನೂರಾರು ಆರ್ಟಿಕಲ್‌ಗಳು ನಮ್ಮ ಸಂವಿಧಾನದಲ್ಲಿದ್ದು, ಇವು ಸಮಾನತೆಯನ್ನು ಸಾಮಾಜಿಕ ನ್ಯಾಯವನ್ನು ಎಲ್ಲೆರಿಗೂ ಕೊಡುವ ಕೆಲಸ ಮಾಡುತ್ತವೆ” ಎಂದು ತಿಳಿಸಿದರು.
“ಮೀಸಲಾತಿ ಎಂದ ಕೂಡಲೇ ನಾವು ಮೂಗು ಮುರಿಯುತ್ತೇವೆ. ಆದರೆ, ಮೀಸಲಾತಿ ಜಗತ್ತಿನ ಎಲ್ಲ ದೊಡ್ಡ ದೇಶಗಳಲ್ಲೂ ಇದೆ. ಕೆನಡ, ಅಮೆರಿಕ, ನ್ಯೂಜಿಲೆಂಡ್, ಸೌತ್ ಆಫ್ರಿಕಾ ಸೇರಿದಂತೆ ಎಲ್ಲ ದೇಶಗಳಲ್ಲೂ ಮೀಸಲಾತಿಗೆ ಅವಕಾಶವಿದೆ. ಸಂವಿಧಾನದ 21ನೇ ವಿಧಿ ಸ್ವಾತಂತ್ರ್ಯವನ್ನು ಕೊಡುತ್ತದೆ. ದಿನದಿಂದ ದಿನಕ್ಕೆ ವಿಕಾಸ ಆಗುವ ಕಾಯ್ದೆ ಇದು. ಇದನ್ನೇ ಸಂವಿಧಾನದ ಹೃದಯ ಎಂದು ಕರೆಯಬಹುದು. ಇದನ್ನ ಜೀವಂತ ಇಡುವುದು ನಮ್ಮ ಕೆಲಸ. ಏಕ ರೂಪ ನಾಗರಿಕ ಸಮೀತೆ ಬಂದಾಗ ನಮ್ಮ ದೇಶದಲ್ಲಿ ಧರ್ಮದ ಆಯಾಮದಲ್ಲಿ ಎಲ್ಲವನ್ನೂ ನೋಡಲಾಗುತ್ತೆ. ಯಾಕೆ?” ಎಂದು ಪ್ರಶ್ನಿಸಿದರು.
“ಮಹಿಳಾ ಮೀಸಲಾತಿ ಕಾಯ್ದೆ 106ನೇ ತಿದ್ದುಪಡಿ. ನಮ್ಮ ದೇಶದಲ್ಲಿ 2-3ಹಂತಗಳಲ್ಲಿ ಇದಕ್ಕಾಗಿ ಹೋರಾಟ ಆಗಿದೆ. ಇಷ್ಟೆಲ್ಲ ಆದರೂ ಮಹಿಳಾ ಮೀಸಲಾತಿ ಸಂಪೂರ್ಣ ಜಾರಿಗೆ ಬಂದಿಲ್ಲ. ಜನಸಂಖ್ಯಾ ಗಣತಿಯ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎನ್ನುತ್ತಿದ್ದರು. 2021ರಲ್ಲಿ ಆಗಬೇಕಿದ್ದ ಗಣತಿ ಇನ್ನೂ ಆಗಲಿಲ್ಲ. ಇದರ ಹಿಂದೆ ಬೇರೆ ಬೇರೆ ರಾಜಕಾರಣವೂ ಇದೆ ಎಂದು ಆರೋಪಿಸಿದ ಅವರು, ಜಾತಿಗಣತಿ ತಾರತಮ್ಯ ಹೆಚ್ಚಿಸುವದಕ್ಕಾಗಿ ಅಲ್ಲ. ಬದಲಾಗಿ ಜಾತಿ ತಾರತಮ್ಯ ನಿರ್ಮೂಲನೆ ಮಾಡಲು. ಇದು ನಿರ್ಮೂಲನೆ ಆದಾಗ ಮಾತ್ರವೇ ಸಮಾನತೆ ಸಾಧ್ಯವಾಗುವುದು” ಎಂದು ತಿಳಿಸಿದರು.
ಅಕ್ಕ ಐಎಎಸ್ ಅಕಾಡಮಿಯ ಡಾ. ಶಿವಕುಮಾರ್ ಮಾತನಾಡಿ, “ರಷ್ಯಾ ಮುಂತಾದ ದೇಶಗಳಿಂದ ನಮ್ಮ ಸಂವಿಧಾನವನ್ನು ಎರವಲು ಪಡೆಯಲಾಗಿದೆ ಅಂತ ಹೇಳಲಾಗುತ್ತೆ. ಆದರೆ ಸ್ವತಃ ಅಂಬೇಡ್ಕರ್ ತಾವು ಸ್ವಾಂತಂತ್ರ್ಯ, ಸಮಾನತೆ, ಸೋದರತೆ ಮುಂತಾದ ವಿಚಾರಗಳನ್ನ ತನ್ನ ಗುರು ಬುದ್ಧನಿಂದ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಇದನ್ನು ಯಾವುದೇ ಪುಸ್ತಕವೂ ಉಲ್ಲೇಖಿಸುವುದಿಲ್ಲ. ಅಷ್ಟೇ ಅಲ್ಲದೆ ಇಲ್ಲಿನವರೇ ಆದ ನೂರಾರು ಸಂತರು, ಸಾಧುಗಳು, ಸತ್ಪುರುಷರು ನಮ್ಮ ಸಂವಿಧಾನವನ್ನು ಪ್ರಭಾವಿಸಿದ್ದಾರೆ. ಇದನ್ನೂ ಯಾವ ಕೃತಿಗಳೂ ಉಲ್ಲೇಖಿಸುವುದಿಲ್ಲ. ನಮ್ಮ ದೇಶದ ಚರಿತ್ರೆಯನ್ನು ನಾವು ಮೀನಿಂಗ್ ಬಿಟ್ವೀನ್ ದಿ ಲೈನ್ಸ್ ಎಂಬಂತೆ ಆಳವಾಗಿ ಗಮನಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ತುಮಕೂರು | ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಮೃತ ಮಹೋತ್ಸವ ಕಾರ್ಯಕ್ರಮ ಮುಂದೂಡಿಕೆ : ಆರ್.ರಾಜೇಂದ್ರ
“ಬ್ರಿಟೀಷರು ಭಾರತಕ್ಕೆ ಬಂದಾಗ ಇಲ್ಲಿನ ಪುರೋಹಿತ ವರ್ಗ ಅವರಿಂದ ಅಪಹಾಸ್ಯಕ್ಕೆ ಒಳಗಾಯಿತು. ಆಗ ಬ್ರಿಟೀಷರಿಂದ ಪ್ರಭಾವಿತವಾಗಿ ತಮ್ಮನ್ನು ತಾವು ವಿಕಾಸಗೊಳಿಸಿಕೊಳ್ಳುವ ಜ್ಯೋತಿ ಭಾ ಪುಲೆ ಮುಂತಾದವರು ಕಾರ್ಯ ನಿರ್ವಹಿಸಿದರು. ಇದನ್ನು ಭಾರತದ ಪುನರುಜ್ಜೀವನ ಚಳವಳಿ ಎಂದು ಕರೆಯಲಾಗಿದೆ. ಇದೇ ಕೆಲಸವನ್ನು ಅಂಬೇಡ್ಕರ್ ಮೊದಲಾದವರು ಮಾಡಿದಾಗ ಅದನ್ನು ಜಾತಿ ನಿರ್ಮೂಲನ ಚಳವಳಿ ಎಂದು ಕರೆಯಲಾಯಿತು” ಎಂದು ವಿವರಿಸಿದರು.
“ಭಾರತದ ಸ್ವಾತಂತ್ರ್ಯ ಚಳವಳಿಗೆ ಅಂಬೇಡ್ಕರ್ ಅಂತವರು ಬರುವವರೆಗೆ ಕೇವಲ ಸ್ವರಾಜ್ಯ ಮಾತ್ರವೇ ಸ್ವಾತಂತ್ರ ಹೋರಾಟಗಾರರ ಆದ್ಯತೆಯಾಗಿತ್ತು. ಯಾರೊಬ್ಬರೂ ಭಾರತದ ಸಾಮಾಜಿಕ ಸುಧಾರಣೆಗಳನ್ನು ಕುರಿತು ಚಿಂತಿಸಿರಲಿಲ್ಲ. ಅಂಬೇಡ್ಕರ್ ಅವರ ಮೂಲಕ ಗಾಂಧಿಯಂತವರೂ ಪ್ರಭಾವಿತರಾಗಿ ಹರಿಜನ ಚಳವಳಿಯನ್ನು ಪ್ರಾರಂಭಿಸಿದರು. ಹೀಗೆ ಬೇರೆ ಬೇರೆ ಸಂಕಥನಗಳ ಮೂಲಕ ನಿಜವಾದ ಚರಿತ್ರೆಯನ್ನು, ನಮ್ಮ ಸಂವಿಧಾನದ ಮೇಲೆ ಪ್ರಭಾವಿಸಿದ ಸ್ಥಳೀಯರನ್ನು ನಾವು ಮರೆಯುವಂತೆ ಮಾಡಲಾಗಿದೆ” ಎಂದರು.