ಸರ್ಕಾರವನ್ನು ಪ್ರಶ್ನಿಸುವುದು, ಆಡಳಿತಾರೂಢ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಸುಳ್ಳುಗಳನ್ನು ಹರಡುವುದು, ಕೋಮುದ್ವೇಷವನ್ನು ಬಿತ್ತುವುದು ಅಕ್ಷಮ್ಯ. ಅದನ್ನು ಪ್ರಜಾತಂತ್ರ ವ್ಯವಸ್ಥೆ ಒಪ್ಪುವುದಿಲ್ಲ. ಹೀಗಾಗಿ ತುರ್ತಾಗಿ ಕ್ರಮ ಜರುಗಿಸಬೇಕೆಂದು ಪ್ರಜ್ಞಾವಂತ ಜನರು ಒತ್ತಾಯಿಸುತ್ತಿದ್ದಾರೆ.
“ಫೇಕ್ ನ್ಯೂಸ್ ಹರಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆʼʼ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಾಯಕರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಆದರೆ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದರೂ ಸುಳ್ಳು ಸುದ್ದಿ, ನಕಲಿ ನರೇಟಿವ್ಗಳ ವಿರುದ್ಧ ಒಂದೇ ಒಂದು ಕಠಿಣ ಕ್ರಮ ಜರುಗಿಸಿದ ಉದಾಹರಣೆ ಕಂಡು ಬರುತ್ತಿಲ್ಲ.
ಸರ್ಕಾರವನ್ನು ಪ್ರಶ್ನಿಸುವುದು, ಆಡಳಿತಾರೂಢ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಸುಳ್ಳುಗಳನ್ನು ಹರಡುವುದು, ಕೋಮುದ್ವೇಷವನ್ನು ಬಿತ್ತುವುದು ಅಕ್ಷಮ್ಯ. ಅದನ್ನು ಪ್ರಜಾತಂತ್ರ ವ್ಯವಸ್ಥೆ ಒಪ್ಪುವುದಿಲ್ಲ. ಹೀಗಾಗಿ ತುರ್ತಾಗಿ ಕ್ರಮ ಜರುಗಿಸಬೇಕೆಂದು ಪ್ರಜ್ಞಾವಂತ ಜನರು ಒತ್ತಾಯಿಸುತ್ತಿದ್ದಾರೆ.
ಮೇ 13ರಂದು ಚುನಾವಣಾ ಫಲಿತಾಂಶ ಹೊರಬಿದ್ದ ದಿನದಿಂದಲೂ ಹಬ್ಬಿಸಲಾಗಿರುವ ಸರಣಿ ಸುಳ್ಳುಗಳ ಕುರಿತು ಒಂದಿಷ್ಟು ತಿರುಗಿ ನೋಡಿದರೂ ಸಾಲು ಸಾಲು ಫ್ಯಾಕ್ಟ್ಚೆಕ್ಗಳು ಕಣ್ಣಿಗೆ ರಾಚುತ್ತವೆ. (ತಿರುಚಿದ ವಿಡಿಯೊ, ಪೋಸ್ಟರ್ಗಳು, ಪರಿಶೀಲನೆ ಮಾಡದೆ ಮಾಧ್ಯಮಗಳು ಮಾಡಿದ ವರದಿಗಳು ಈ ಸುಳ್ಳುಗಳ ಭಾಗವಾಗಿವೆ.)
ಸುಳ್ಳು 1: ಕಾಂಗ್ರೆಸ್ ಬಹುಮತ ಪಡೆದ ಬೆನ್ನಲ್ಲೇ ಬೆಳಗಾವಿಯಲ್ಲಿ ಕೆಲವು ಯುವಕರು ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ, ಭಟ್ಕಳದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ.
ವಾಸ್ತವ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಸೀಫ್ (ರಾಜ್) ಸೇಠ್ ಜಿಂದಾಬಾದ್ ಎಂದಿದ್ದನ್ನು ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಪ್ರಚಾರ ಮಾಡಲಾಗಿತ್ತು. ಭಟ್ಕಳದಲ್ಲಿ ಹಾರಿಸಿದ್ದು ಧಾರ್ಮಿಕ ಧ್ವಜವೇ ಹೊರತು, ಪಾಕಿಸ್ತಾನದ ದೇಶದ ಬಾವುಟವಾಗಿರಲಿಲ್ಲ.
ಸುಳ್ಳು 2: ಕರ್ನಾಟಕದಲ್ಲಿ ಖಾನ್ ಗ್ರೇಸ್ ವಿಜಯೋತ್ಸವವನ್ನು ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡುವ ಮೂಲಕ ಆಚರಿಸಲಾಗುತ್ತದೆ. ನಿಜವಾದ ಭಾರತೀಯರು, ಕಾಂಗೆಸ್ಸಿಗೆ ಬೆಂಬಲಿಸಿದ ಮಠಾಧೀಶರಿಗೆ ತಲುಪುವವರೆಗೆ ಶೇರ್ ಮಾಡೋಣ.
ವಾಸ್ತವ: ಫೆಬ್ರವರಿ 2, 2022 ರಂದು ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಯ ಪ್ರಕಾರ, ಜನವರಿ 30, 2022 ರಂದು ಮಣಿಪುರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ 60 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ಬೆನ್ನಲ್ಲೇ, ಈ ವಿಡಿಯೊ ಕ್ಲಿಪ್ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತ್ತು. ಕೆಲವು ಪುಂಡರು ಬಿಜೆಪಿ ಧ್ವಜವನ್ನಿಟ್ಟು ಹಸುವಿನ ಕತ್ತನ್ನು ಕೋಯ್ದು ಮಣಿಪುರದ ಮುಖ್ಯಮಂತ್ರಿ ಎನ್ ಬೀರೇನ್ ಸಿಂಗ್ ಮತ್ತು ಮಣಿಪುರ ಘಟಕದ ಬಿಜೆಪಿ ಅಧ್ಯಕ್ಷೆ ಶಾರದಾ ದೇವಿ ವಿರುದ್ದ ಘೋಷಣೆ ಕೂಗಿದ್ದಾರೆಂದು ಪತ್ರಿಕಾ ವರದಿ ಉಲ್ಲೇಖಿಸಿದೆ.
ಸುಳ್ಳು 3: “ಕಾಂಗ್ರೆಸ್ ಅನ್ನು ಆರಿಸಿದ ಕರ್ನಾಟಕದ ಜನರಿಗೆ ಹೃದಯಪೂರ್ವಕ ಧನ್ಯವಾದಗಳು. ಕಾಂಗ್ರೆಸ್ ಹಾಗೂ ನಮ್ಮ ಎಸ್ಡಿಪಿಐ ಜೊತೆಗೂಡಿ ಭಾರತದಲ್ಲಿ ಇಸ್ಲಾಂ ಸದೃಢಗೊಳಿಸಲು ಕೆಲಸ ಮಾಡಲಿವೆ ಹಾಗೂ ಕರ್ನಾಟಕದ ಸಾರ್ವಭೌಮತೆಯನ್ನು ಕಾಪಾಡಲಿವೆ ಎಂಬ ಆಶಾಭಾವ ಇದೆ” ಎಂದು ಮೇ 13ರಂದು ಪಾಕಿಸ್ತಾನದ ಪ್ರಧಾನಿ ಷರೀಫ್ ಟ್ವೀಟ್ ಮಾಡಿದ್ದಾರೆ.
ವಾಸ್ತವ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಟ್ವಿಟರ್ಅನ್ನು ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್ನಲ್ಲಿ ಉಲ್ಲೇಖವಾಗಿರುವಂತೆ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಶೆಹಬಾಜ್ ಷರೀಫ್ ಅವರ ಟ್ವಿಟರ್ ಪ್ರೊಫೈಲ್ನಲ್ಲಿ ಮೇ 13ರಂದು ಕೇವಲ ಮೂರು ಟ್ವೀಟ್ಗಳನ್ನು ಮಾತ್ರ ಮಾಡಲಾಗಿದೆ. ಅವುಗಳಲ್ಲಿ ಯಾವುದೂ ಕರ್ನಾಟಕ ಚುನಾವಣೆಗೆ ಸಂಬಂಧಿಸಿಲ್ಲ.
ಸುಳ್ಳು 4: ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ಮತಹಾಕಿದ್ದಾನೆ ಎಂಬ ಕಾರಣಕ್ಕೆ ಆಟೋ ಚಾಲಕ ಹರೀಶ್ ರಾವ್ ಘೋರ್ಪಡೆ ಎಂಬವರಿಗೆ ಥಳಿಸಲಾಗಿದೆ (ಇದನ್ನು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ).
ವಾಸ್ತವ: “ಬಿಜೆಪಿಗೆ ಮತ ನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ, ನಾವೆಲ್ಲ ಸ್ನೇಹಿತರು ಒಟ್ಟಿಗೆ ಮದ್ಯ ಸೇವಿಸಿದೆವು. ಸ್ನೇಹಿತರು ಮಧ್ಯೆ ಜಗಳವಾಗಿ ಆಗ ಆಟೋ ಟಾಪ್, ಗ್ಲಾಸ್ ಒಡೆದು ಹೋಗಿದೆ. ಅದಕ್ಕೆ ಕಂಪ್ಲೇಂಟ್ ಕೊಡಲು ಎಸ್ಪಿ ಕಚೇರಿಗೆ ಹೋಗಿದ್ದೆ. ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹೊಡೆದರು ಎಂದು ನಾನೆಲ್ಲೂ ಹೇಳಿಲ್ಲ” ಎಂದು ಹರೀಶ್ ಸ್ಪಷ್ಟೀಕರಣ ನೀಡಿದ್ದರು.
ಸುಳ್ಳು 5: “ಪೊಲೀಸರಿಗೆ ಕಾಂಗ್ರೆಸ್ನ ಬೆಂಬಲಿಗರು ಬೆದರಿಕೆ ಹಾಕಿದ್ದಾರೆʼʼ. (ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದಂತೆ ಈ ಪೋಸ್ಟ್ ವೈರಲ್ ಆಗಿತ್ತು.)
ವಾಸ್ತವ: 2018ರಲ್ಲಿ ಮಹಾರಾಷ್ಟ್ರದ ಚೋಪ್ಡಾ ಬಸ್ ನಿಲ್ದಾಣದ ಬಳಿ ನಡೆದ ಘಟನೆ ಇದಾಗಿತ್ತು. ಪೊಲೀಸ್ ಕಾನ್ ಸ್ಟೆಬಲ್ ಶ್ರೀಕಾಂತ್ ಗಂಗುರ್ಡೆ ಎಂಬವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬಸ್ ನಿಲ್ದಾಣದೊಳಗೆ ಹಣ್ಣಿನ ಅಂಗಡಿ ಇಟ್ಟಿದ್ದ ವ್ಯಕ್ತಿಯೊಬ್ಬರಿಗೆ ಈ ಕಾನ್ ಸ್ಟೆಬಲ್, “ದೂರ ಹೋಗಿ” ಎಂದು ಹೇಳಿದ್ದರು. ಆ ಪ್ರದೇಶವು ವಿಶೇಷ ಚೇತನರಿಗೆ ಮೀಸಲಾಗಿದ್ದ ಕಾರಣಕ್ಕೆ ಪೊಲೀಸರ ಜತೆ ವ್ಯಾಪಾರಿ ಜಗಳವಾಡಿದ್ದನು.
ಸುಳ್ಳು 6: ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ಸಮರ್ಥನೆ ಮಾಡಿರುವ ಸಚಿವ ಜಮೀರ್ ಅಹಮ್ಮದ್, “ನಮ್ ಮಾತೃಭಾಷೆ ಉರ್ದು, ಕನ್ನಡ ಓದೋಕೆ ಬರೆಯೋಕೆ ಬರಲ್ಲ. ಮುಂದೆ ಕಲಿಯೋದು ಇಲ್ಲ, ಏನಿವಾಗ?” ಎಂದು ಹೇಳಿದ್ದಾರೆ.
ವಾಸ್ತವ: ಈ ರೀತಿಯ ಯಾವುದೇ ಹೇಳಿಕೆಯನ್ನು ಜಮೀರ್ ಅಹಮ್ಮದ್ ನೀಡಿರಲಿಲ್ಲ.
ಹೀಗೆ ಸುಳ್ಳುಗಳ ಸರಣಿ ಬೆಳೆಯುತ್ತಲೇ ಹೋಗುತ್ತದೆ. “ಬಾಡಿಗೆ ಹಣ ಕೈತಪ್ಪಲಿದೆ ಎಂಬ ಕಾರಣಕ್ಕೆ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ವಿರೋಧಿಸಿವೆ” ಎಂಬ ಸುಳ್ಳು, ಭಾರತೀಯ ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಹೋರಾಡುತ್ತಿದ್ದ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿದಾಗ ಅವರು (ಕುಸ್ತಿಪಟುಗಳು) ಖುಷಿಯಾಗಿ ಸೆಲ್ಪಿ ತೆಗೆದುಕೊಂಡಿದ್ದಾರೆಂದು ಹರಿಯಬಿಟ್ಟ ನಕಲಿ ಚಿತ್ರ, “ಕೈರೋದ ಮೊಕಟ್ಟಮ್ ಪ್ರದೇಶದಲ್ಲಿನ ಬಟ್ಟೆ ಅಂಗಡಿಯ ಮಾಲೀಕರೊಬ್ಬರು ತಮ್ಮ ಬಟ್ಟೆ ಮಳಿಗೆಗೆ ಬೇಕಿರುವ ಮಾನವಾಕೃತಿ ಬೊಂಬೆಯನ್ನು ಖರೀದಿಸಿ ಬೈಕ್ನಲ್ಲಿ ಕೊಂಡೊಯ್ಯುತ್ತಿದ್ದ ಚಿತ್ರಕ್ಕೆʼʼ ಕೋಮು ಕತೆ ಕಟ್ಟಿ, “ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿಯನ್ನು ಕೊಂದು ಆಕೆಯ ಮೃತ ದೇಹವನ್ನು ರಾಜಾರೋಷವಾಗಿ ತನ್ನ ಬೈಕ್ನ ಹಿಂಬದಿ ಸೀಟಿನಲ್ಲಿ ಇರಿಸಿಕೊಂಡು ಹೋಗುತ್ತಿದ್ದಾನೆʼʼ ಎಂದು ಹರಡಲಾದ ಸುಳ್ಳು- ಇದ್ಯಾವುದಕ್ಕೂ ಗಡಿ ಮತ್ತು ಭಾಷೆಯ ಹಂಗಿಲ್ಲ. ಹಿಂದಿ, ಇಂಗ್ಲಿಷ್ನಲ್ಲಿ ಬರುವ ನಕಲಿ ಪೋಸ್ಟರ್ಗಳು ಕನ್ನಡಕ್ಕೂ ತರ್ಜುಮೆಯಾಗಿ ಇಲ್ಲಿನ ಜನರನ್ನೂ ಪ್ರಚೋದಿಸುತ್ತವೆ.
ಒಡಿಸ್ಸಾ ರೈಲು ದುರಂತಕ್ಕೂ ಕೋಮು ಬಣ್ಣ
ಒಡಿಸ್ಸಾದಲ್ಲಾದ ತ್ರಿವಳಿ ರೈಲು ದರಂತದಲ್ಲಿ 250ಕ್ಕೂ ಹೆಚ್ಚು ಜನರು ಸತ್ತರು. ಆದರೆ ಘಟನೆಗೂ ಧರ್ಮದ ಬಣ್ಣ ಬಳಿಯಲಾಗಿತ್ತು. ಕರ್ನಾಟಕದಲ್ಲಿ ಸುಳ್ಳು ಹಬ್ಬಿಸುವಲ್ಲಿ ಮುಂಚೂಣಿಯಲ್ಲಿರುವ ಕೆಲವು ಬಿಜೆಪಿ ಕಾರ್ಯಕರ್ತರೂ ಇದರ ಭಾಗವಾಗಿದ್ದರು. ಘಟನಾ ಸ್ಥಳದಲ್ಲಿ ಮಸೀದಿ ಇದ್ದಿದ್ದರಿಂದಲೇ ತ್ರಿವಳಿ ರೈಲು ಅಪಘಾತವಾಗಿದೆ ಎಂಬರ್ಥದ ಪೋಸ್ಟ್ಗಳನ್ನು ಮಾಡಲಾಗಿದೆ. ವಾಸ್ತವದಲ್ಲಿ ಬಿಜೆಪಿ ಬೆಂಬಲಿಗರು ಹಂಚಿಕೊಂಡ ಫೋಟೋದ ಚಿತ್ರವು ಮಸೀದಿಯಾಗಿರಲಿಲ್ಲ, ಇಸ್ಕಾನ್ ದೇವಾಲಯವಾಗಿತ್ತು.

ರೈಲ್ವೆ ದುರವಸ್ಥೆಯ ಕುರಿತು ಚರ್ಚೆಗಳು ಮುನ್ನೆಲೆಗೆ ಬಂದಾಗ ಕೋಮು ಆಯಾಮದ ಸುಳ್ಳುಗಳನ್ನು ಸರಣಿಯಾಗಿ ಹರಿಬಿಡಲಾಯಿತು. “ರೈಲು ಕಂಬಿಗಳ ಮೇಲೆ ಕಲ್ಲುಗಳನ್ನು ಇಟ್ಟು ರೈಲು ಹಳಿ ತಪ್ಪುವಂತೆ ಮಾಡಲು ಮುಸ್ಲಿಂ ಸಮುದಾಯದವರು ಬಾಲಕರನ್ನು ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ರೈಲು ದುರಂತ ನಡೆಯಲು ಸಂಚು ರೂಪಿಸಲಾಗಿದೆ. ರೈಲ್ವೆ ಟ್ರ್ಯಾಕ್ ಮೆನ್ಗಳು ಇಂಥವರನ್ನು ಹಿಡಿದಿದ್ದಾರೆʼʼ ಎಂದು ಸುಳ್ಳು ಹಬ್ಬಿಸಲಾಯಿತು. ವಾಸ್ತವದಲ್ಲಿ ಇದು ಐದು ವರ್ಷಗಳ ಹಿಂದಿನ ವಿಡಿಯೊವಾಗಿತ್ತು. ಹೆಚ್ಚಿನ ವಿವರಗಳಿಗಾಗಿ ರಾಯಚೂರು ರೈಲ್ವೆಯ ವೃತ್ತ ನಿರೀಕ್ಷಕರಾದ ರವಿಕುಮಾರ್ ಅವರನ್ನು ʼಆಲ್ಟ್ನ್ಯೂಸ್ʼ ಸಂಪರ್ಕಿಸಿ, ಮಾಹಿತಿ ಪಡೆದಿತ್ತು. “ಈ ವೀಡಿಯೊ 2018 ರದ್ದು. ಹತ್ತಿರದ ಕೊಳೆಗೇರಿಗಳ ಮಕ್ಕಳು ಟ್ರ್ಯಾಕ್ ಬಳಿ ಕಲ್ಲುಗಳನ್ನು ಇಟ್ಟು ಆಟವಾಡುತ್ತಿದ್ದರು. ಆದರೆ ರೈಲಿಗೆ ಯಾವುದೇ ಹಾನಿ ಮಾಡುವ ಉದ್ದೇಶ ಮಕ್ಕಳಿಗೆ ಇರಲಿಲ್ಲ. ಅಲ್ಲಿದ್ದ ಟ್ರಾಕ್ಮೆನ್ ಹುಡುಗರನ್ನು ಗದರಿಸಿ ಕಳುಹಿಸಿದ್ದರುʼʼ ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದರು.
“ಬಾಲಾಸೋರ್ ರೈಲು ಅಪಘಾತಕ್ಕೆ ಕಾರಣನಾದ ಸ್ಟೇಷನ್ ಮಾಸ್ಟರ್ ಷರೀಫ್ ಎಂಬುವವರು ನಾಪತ್ತೆಯಾಗಿದ್ದಾನೆʼʼ ಎಂದು ಸುಳ್ಳು ಹಬ್ಬಿಸಲಾಯಿತು. ವಾಸ್ತವದಲ್ಲಿ ಷರೀಫ್ ಎಂಬ ಹೆಸರಿನ ಸ್ಪೇಷನ್ ಮಾಸ್ಟರ್ ಸದರಿ ಸ್ಥಳದಲ್ಲಿ ಇಲ್ಲವೇ ಇಲ್ಲ.
“ನನ್ನ ಪೂರ್ವಜರು ಮುಸ್ಲಿಮರು, ನಾನೊಬ್ಬ ಮುಸ್ಲಿಂ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ವೊಂದನ್ನು ಹರಿಬಿಡಲಾಗಿತ್ತು. ಇದು ಕೂಡ ನಕಲಿಯಾಗಿತ್ತು. ಹಾಗೆಯೇ ರಾಹುಲ್ ಗಾಂಧಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಫೇಕ್ ನ್ಯೂಸ್ ಹರಿಬಿಡಲಾಗಿದೆ.
ಹಜ್ ಭವನ ನಿರ್ಮಾಣಕ್ಕೆ 5 ಸಾವಿರ ಕೋಟಿ ಎಂಬ ಸುಳ್ಳು ಸುದ್ದಿ
“ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ಮುಸ್ಲಿಮರನ್ನು ಓಲೈಕೆ ಮಾಡಲು ಪ್ರಾರಂಭಿಸಲಾಗಿದೆ. ಹಜ್ ಭವನ ನಿರ್ಮಾಣಕ್ಕೆ 5 ಸಾವಿರ ಕೋಟಿ ನೀಡಿದ್ದಾರೆʼʼ ಎಂದು ಪೋಸ್ಟರ್ ವೊಂದನ್ನು ಹಂಚಿಕೊಳ್ಳಲಾಗಿತ್ತು. ಅಂತಹ ಯಾವುದೇ ಪ್ರಕಟನೆಯನ್ನಾಗಲೀ, ಹೇಳಿಕೆಯನ್ನಾಗಲೀ ಸರ್ಕಾರ ನೀಡಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಸ್ಪಷ್ಟೀಕರಣ ನೀಡಿದ್ದರು.

ಪ್ರಿಯಾಂಕ್ ಖರ್ಗೆ ಫಸ್ಟ್ ಪಿಯುಸಿಯನ್ನೂ ಪಾಸ್ ಮಾಡಿಲ್ಲ ಎಂಬ ಸುಳ್ಳು
ಚಕ್ರವರ್ತಿ ಸೂಲಿಬೆಲೆಯವರನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ ಬೆನ್ನಲ್ಲೇ ಸುಳ್ಳೊಂದನ್ನು ಹರಿಬಿಡಲಾಯಿತು. “ಫಸ್ಟ್ ಪಿಯುಸಿಯನ್ನೇ ಪಾಸ್ ಮಾಡದ ಪ್ರಿಯಾಂಕ್ ಖರ್ಗೆ, ಇಂಜಿನಿಯರಿಂಗ್ ಮಾಡಿರುವ ಚಕ್ರವರ್ತಿ ಸೂಲಿಬೆಲೆಯನ್ನು ಪ್ರಶ್ನೆ ಮಾಡುತ್ತಿದ್ದಾರೆʼʼ ಎಂದು ಹಬ್ಬಿಸಲಾಗಿತ್ತು. ಆದರೆ ಪ್ರಿಯಾಂಕ್ ಖರ್ಗೆಯವರು ಅನಿಮೇಷನ್ನಲ್ಲಿ ಡಿಪ್ಲೊಮಾ (Diploma in Animation) ಕೋರ್ಸ್ ಮುಗಿಸಿದ್ದಾರೆ.
ಶಕ್ತಿ ಯೋಜನೆ ಕುರಿತು ಅಪಪ್ರಚಾರ
ಮಹಿಳೆಯರಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ʼಶಕ್ತಿʼ (ಉಚಿತವಾಗಿ ಬಸ್ ಪ್ರಯಾಣ) ಯೋಜನೆ ಜನಪ್ರಿಯವಾಗುತ್ತಿದ್ದಂತೆ ಇದರ ಕುರಿತು ಇಲ್ಲಸಲ್ಲದ ಕತೆಗಳನ್ನು ಕಟ್ಟಲಾಯಿತು. ಇದರಿಂದ ಆರ್ಥಿಕ ನಷ್ಟವಾಗುತ್ತದೆ ಎಂಬುದರಿಂದ ಹಿಡಿದು, ಶಕ್ತಿ ಯೋಜನೆಯಿಂದಲೇ ಎಲ್ಲ ಅವಘಡಗಳು ನಡೆಯುತ್ತಿವೆ ಎಂಬಂತೆ ನರೇಟಿವ್ಗಳನ್ನು ಕಟ್ಟಲಾಯಿತು. ಮಹಿಳೆಯರು ಬಸ್ ಡೋರ್ ಮುರಿದು ಹಾಕಿದ್ದಾರೆಂದು ಮಾಡಿದ ವರದಿಗಳು ನಿಜಕ್ಕೂ ನಕಲಿಯಾಗಿದ್ದವು.
“ಮಂಡ್ಯದ ಹತ್ತಿರ ಹುಲ್ಲೀನಹಳ್ಳಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಜನ ಹತ್ತುವಾಗ ಮಹಿಳೆಯರ ಸಂಖ್ಯೆ ಹೆಚ್ಚಿದ್ದರಿಂದ ಕಿಟಿಕಿಯ ಮೂಲಕ ಹತ್ತಲು ಹೋಗಿ ಮಹಿಳೆಯೊಬ್ಬರ ಕೈ ತುಂಡಾಗಿದೆ. ಇದು ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣದ ಗಿಫ್ಟ್ʼʼ ಎಂದು ಕುಹಕವಾಡಿ ವಿಡಿಯೊವೊಂದನ್ನು ಹರಿಬಿಟ್ಟಿದ್ದರು. ವಾಸ್ತವದಲ್ಲಿ ಇದು ನಂಜನಗೂಡಿನಿಂದ ನರಸೀಪುರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಅಪಘಾತಕ್ಕೆ ಸಂಬಂಧಿಸಿತ್ತು. ಬಸವರಾಜಪುರ ಎಂಬ ಊರಿನ ಹತ್ತಿರ, ಎದುರು ದಿಕ್ಕಿನಿಂದ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಚಾಲಕನು ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಬಲ ಹಿಂಬದಿ ಕಿಟಕಿಗೆ ಢಿಕ್ಕಿ ಹೊಡೆದ ಪರಿಣಾಮ, ಕಿಟಕಿಯ ಸೀಟ್ನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರತರವಾದ ಗಾಯಗಳಾಗಿದ್ದವು.

ಕೊಲೆ ಪ್ರಕರಣಗಳಿಗೆ ಕೋಮು ಬಣ್ಣ
“ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಕೊಲೆಯಾಗುತ್ತಿದೆʼʼ ಎಂಬ ನಿರೂಪಣೆಯನ್ನು ಬಿಜೆಪಿ ಆರಂಭಿಸಿತು. ಶವರಾಜಕಾರಣವನ್ನು ಶುರು ಮಾಡಿತು. ಇಲ್ಲದ ಕೋಮು ಆಯಾಮವನ್ನು ಹುಡುಕಲು ಮುಂದಾಯಿತು.
ಅಂತಹ ಮೂರು ಪ್ರಕರಣಗಳು
1. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣ
2. ತಿ.ನರಸೀಪುರ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಕೊಲೆ ಪ್ರಕರಣ
3. ಅಮೃತಹಳ್ಳಿಯ ಪಂಪ ಲೇಔಟ್ನಲ್ಲಿರುವ ಏರೋನಿಕ್ಸ್ ಮೀಡಿಯಾ ಪ್ರೈ.ಲಿ. ಎಂಡಿ ಫಣೀಂದ್ರ ಸುಬ್ರಮಣ್ಯ ಮತ್ತು ಅದರ ಸಿಇಒ ವಿನುಕುಮಾರ್ ಕೊಲೆ ಪ್ರಕರಣ
ಈ ಮೂರು ಪ್ರಕರಣಗಳು ವೈಯಕ್ತಿಕ ಕಾರಣಕ್ಕೆ ಆಗಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಆದರೆ ಮೊದಲ ಪ್ರಕರಣದಲ್ಲಿ ಒಬ್ಬ ಮುಸ್ಲಿಂ ಆರೋಪಿ ಇರುವುದು, ಎರಡನೇ ಪ್ರಕರಣದಲ್ಲಿ ಆರು ಆರೋಪಿಗಳಲ್ಲಿ ಒಬ್ಬಾತ ಮುಸ್ಲಿಂ ಆರೋಪಿ ಇರುವುದು ಮತ್ತು ಮೂರನೇ ಪ್ರಕರಣದಲ್ಲಿ ಆರೋಪಿ ಸ್ವಾಮೀಜಿಯಂತೆ ಧರಿಸಿ ತೆಗೆಸಿಕೊಂಡಿದ್ದ ಒಂದು ಫೋಟೋ ಕೋಮು ನಿರೂಪಣೆಗೆ ಬಳಕೆಯಾಗಿದ್ದವು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿದ್ದರೂ ಕೋಮು ಆಯಾಮವನ್ನೇ ಹುಡುಕಲಾಗುತ್ತಿದೆ.
ಮಣಿಪುರ ಅತ್ಯಾಚಾರ ಪ್ರಕರಣದಲ್ಲೂ ವಿಕೃತಿ
ಮಣಿಪುರದಲ್ಲಿ ಕುಕಿ ಸಮುದಾಯದ ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ದೇಶವನ್ನು ಬೆಚ್ಚಿ ಬೀಳಿಸಿದ ಬಳಿಕ ಮಣಿಪುರ ಹಿಂಸಾಚಾರದ ಕುರಿತು ಮೊದಲ ಬಾಯಿಗೆ ಪ್ರಧಾನಿ ಮೋದಿ ಮೌನ ಮುರಿದಿದ್ದರು. 78 ದಿನ ಯಾವುದೇ ಮಾತನಾಡದೆ ಇರುವ ಪ್ರಧಾನಿಯ ವಿರುದ್ಧವೂ ತೀವ್ರ ಟೀಕೆಗಳು ವ್ಯಕ್ತವಾದಾಗ ಬಿಜೆಪಿ ಕಾರ್ಯಕರ್ತರು ಈ ವಿಚಾರವಾಗಿಯೂ ಕೀಳುಮಟ್ಟದ ರಾಜಕಾರಣಕ್ಕೆ ಇಳಿದರು. ನಕಲಿ ನಿರೂಪಣೆಗಳನ್ನು ಹಂಚಿಕೊಂಡರು. ಕುಕಿ ಮತ್ತು ಮೇತೀ ನಡುವೆ ಎಸ್ಟಿ ಮೀಸಲಾತಿ ವಿಚಾರವಾಗಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಹೊಸ ಹೊಸ ಕಾರಣಗಳನ್ನು ಥಳುಕು ಹಾಕಲಾಯಿತು. “ಡ್ರಕ್ ಮಾಫಿಯಾ ನಡೆಯುತ್ತಿರುವುದನ್ನು ಬಿಜೆಪಿ ತಡೆಯಲು ಮುಂದಾಗಿದ್ದರಿಂದ ಈ ಹಿಂಸಾಚಾರ ನಡೆಯುತ್ತಿದೆ, ಮಹಿಳೆಯರು ಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ಪೊಲೀಸರನ್ನು ಥಳಿಸುತ್ತಿದ್ದಾರೆʼʼ ಎಂಬೆಲ್ಲ ನಿರೂಪಣೆಗಳು ಬಂದವು. ಉತ್ತರ ಪ್ರದೇಶದಲ್ಲಿ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯ ವಿಡಿಯೊವೊಂದನ್ನು ಈ ನಿರೂಪಣೆಗೆ ಬಳಸಲಾಯಿತು. ಕರ್ನಾಟಕ ಬಿಜೆಪಿಯ ಅನೇಕ ಬೆಂಬಲಿಗರು ಇದನ್ನೇ ಪ್ರಚಾರ ಮಾಡಿದರು.

ನಕಲಿ ನಿರೂಪಣೆಯ ಹೊಸ ಕಥನ: ಉಡುಪಿ ಪ್ರಕರಣ
ಖಾಸಗಿ ಕಾಲೇಜೊಂದರ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿದ್ದ ಹಿಂದೂ ವಿದ್ಯಾರ್ಥಿನಿಯ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂಬ ವಿವಾದ ಭುಗಲೆದ್ದಿದೆ. ʻಇದೊಂದು ಪ್ರಾಂಕ್ ವಿಡಿಯೊ, ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಕದ್ದುಮುಚ್ಚಿ ಉಪಯೋಗಿಸಿದ್ದರಿಂದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆʼ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ. ಆದರೆ ಅದಕ್ಕೆ ಕೋಮು ಬಣ್ಣವನ್ನು ಬಳಿದಾಯಿತು. ಕಾರಣ- ವಿಡಿಯೊ ಚಿತ್ರೀಕರಣ ಮಾಡಿದ್ದು ಮುಸ್ಲಿಂ ಹುಡುಗಿಯರಾಗಿದ್ದರು.
ಉಡುಪಿ ಪೊಲೀಸರು ಆ ಮೂವರು ಹೆಣ್ಣು ಮಕ್ಕಳು ಮತ್ತು ಕಾಲೇಜಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಸುದ್ದಿ ಪ್ರಸಾರ ಮಾಡಿದರು ಅಂತ ಒನ್ ಇಂಡಿಯಾ ಸಂಸ್ಥೆ ಮತ್ತು ಷೇರ್ ಮಾಡಿಕೊಂಡ ವ್ಯಕ್ತಿಯ ಮೇಲೂ ಕೇಸು ಮಾಡಿದ್ದಾರೆ. ಮುಖ್ಯವಾಗಿ ಈ ಪ್ರಕರಣ ಕೋಮು ತಿರುವು ಪಡೆಯಲು ಕಾರಣವಾಗಿದ್ದು ರಶ್ಮಿ ಸಮಂತ್ ಎಂಬ ಮಹಿಳೆ. ಆಕ್ಸ್ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ (ಜನಾಂಗೀಯತೆ, ಟ್ರಾನ್ಸ್ಫೋಬಿಕ್ ಪೋಸ್ಟ್ಗಳ ಕಾರಣಕ್ಕೆ ಅಧ್ಯಕ್ಷ ಸ್ಥಾನ ಕಳೆದುಕೊಂಡವರು ಇವರು) ರಶ್ಮಿ, ಉಡುಪಿ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಬ್ಬಿಸಿದ್ದರಲ್ಲಿ ಅಗ್ರಗಣ್ಯರು. ಇಂಥವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ!
ಮೇಲೆ ಉಲ್ಲೇಖಿಸಿದ್ದು ಕೆಲವು ಪ್ರಕರಣಗಳಷ್ಟೇ. ನಿತ್ಯವೂ ಸಾಲು ಸಾಲು ಸುಳ್ಳು ಸುದ್ದಿ, ನಕಲಿ ನರೇಟಿವ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇವೆ. ಕೆಲವು ಸುದ್ದಿ ಮಾಧ್ಯಮಗಳು ಮುಂದಾಲೋಚನೆ ಮಾಡದೆ ಇಂತಹ ಫೇಕ್ ನರೇಟಿವ್ಗಳಿಗೆಯೇ ಆದ್ಯತೆ ನೀಡುತ್ತಿವೆ. ನಿಜಕ್ಕೂ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವುದಾದರೆ, “ಸುಳ್ಳು ಸುದ್ದಿ, ನಕಲಿ ನರೇಟಿವ್, ದ್ವೇಷದ ಮಾತುಗಳ ವಿರುದ್ಧ ಕಠಿಣ ಕಾನೂನು ರೂಪಿಸಲಿ ಅಥವಾ ಈಗಿರುವ ಕಾನೂನಿನಲ್ಲೇ ಅಗತ್ಯ ಕ್ರಮಗಳನ್ನು ಜರುಗಿಸಲಿʼʼ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.