ನೀರಿನ ಸಮಸ್ಯೆ ಎದುರಿಸುತ್ತಿದ್ದ ಅಂಗನವಾಡಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ 55 ವರ್ಷದ ಮಹಿಳೆಯೊಬ್ಬರು ಏಕಾಂಗಿಯಾಗಿ ಬಾವಿ ತೋಡುತ್ತಿದ್ದು, ಮಾದರಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗೌರಿ ಸಿ ನಾಯ್ಕ್ ಅವರು ಬಾವಿ ತೋಡುತ್ತಿರುವ ದಿಟ್ಟ ಮಹಿಳೆ.
ನಗರದ ಗಣೇಶನಗರದಲ್ಲಿರುವ ಅಂಗನವಾಡಿಯಲ್ಲಿ ನೀರಿನ ಸಮಸ್ಯೆಯಿದೆ. ಮಕ್ಕಳಿಗೆ ಅಡುಗೆ ಮಾಡಲುಮತ್ತು ಕುಡಿಯಲು ನೀರು ತರಲು ಅಂಗನವಾಡಿ ಶಿಕ್ಷಕರು ದಿನನಿತ್ಯ ಸುಮಾರು ಅರ್ಧ ಕಿ.ಮೀ ಹೋಗಬೇಕಿತ್ತು. ಶಿಕ್ಷಕರ ಪರಿಸ್ಥಿತಿ ಕಂಡು ಮನವೊಂದ ಗೌರಿ ಅವರು ಅಂಗನವಾಡಿಗಾಗಿ ಬಾವಿ ತೋಡುತ್ತಿದ್ದಾರೆ.
“ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಅಡುಗೆ ಮಾಡಬೇಕು ಮತ್ತು ಅವರನ್ನು ನೋಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ದೂರದ ಬಾವಿಯಿಂದ ನೀರು ತರುವ ಹೊರೆಯೂ ಅವರ ಮೇಲಿದೆ. ಅವರ ಪರಿಸ್ಥಿತಿ ಕಂಡು ಅಂಗನವಾಡಿ ಆವರಣದಲ್ಲಿ ಬಾವಿ ತೋಡುವುದಾಗಿ ಕಳೆದ ವರ್ಷ ಭರವಸೆ ನೀಡಿದ್ದೆ. ಅದರಂತೆ ಬಾವಿ ತೋಡುತ್ತಿದ್ದೇನೆ,” ಎಂದು ಗೌರಿ ಹೇಳಿದರು.
ಕಳೆದ ವಾರ ಅಂಗನವಾಡಿ ಹಿಂಭಾಗದಲ್ಲಿ ಭಾವಿ ತೋಡಲು ಜಾಗ ಗುರಿಸಿದ್ದ ಗೌರಿ, ಕೆಲಸ ಆರಂಭಿಸಿದ್ದರು. ಭೂಮಿಯನ್ನು ಅಗೆಯುವುದು ಮತ್ತು ಮಣ್ಣನ್ನು ಹೊರಹಾಕುವ ಎರಡೂ ಕೆಲಸವನ್ನೂ ಒಬ್ಬರೇ ಮಾಡುತ್ತಿದ್ದಾರೆ.
“ನಾನು 4 ಅಡಿ ಅಗಲದ ಬಾವಿಯನ್ನು ನಿರ್ಮಿಸಲು ಯೋಜಿಸುತ್ತಿದ್ದೇನೆ. ನೀರು ಸಿಗುವವರೆಗೂ ಬಿಡುವುದಿಲ್ಲ. 50 ಅಡಿಗಳಷ್ಟು ಆಳದಲ್ಲಿ ನೀರು ದೊರೆಯಬಹುದು. ಮುಂದಿನ ಕೆಲವು ವಾರಗಳಲ್ಲಿ ಬಾವಿ ತೋಡುವುದನ್ನು ಮುಂದುವರೆಸುತ್ತೇನೆ. ಈ ಬಾವಿ ಅಂಗನವಾಡಿಗೆ ಮಾತ್ರವಲ್ಲ, ಈ ಪ್ರದೇಶದ ನಿವಾಸಿಗಳಿಗೂ ನೆರವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಗೌರಿ ಅಗೆಯುತ್ತಿರುವ ಮೂರನೇ ಬಾವಿ ಇದಾಗಿದೆ. ಈ ಹಿಂದೆ ತನ್ನ ಜಮೀನಿನಲ್ಲಿ ಮತ್ತು ತನ್ನ ಮನೆ ಆವರಣದಲ್ಲಿ ಬಾವಿ ತೆಗೆದಿದ್ದಾರೆ. 1.5 ಎಕರೆ ಜಮೀನು ಹೊಂದಿರುವ ಆಕೆ, ತನ್ನ ಜಮೀನಿನಲ್ಲಿ ಮೊದಲ ಬಾವಿ ತೋಡಿದ್ದಾರೆ. 45 ಅಡಿಗಳಷ್ಟು ಆಳದಲ್ಲಿ ಅವರಿಗೆ ನೀರು ದೊರೆತಿದೆ. ಆ ನೀರು ಅವರ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಸಾಕಾಗುತ್ತಿದೆ. ತನ್ನ ಮನೆಗೆ ನೀರು ಪಡೆಯಲು, ತಮ್ಮ ಮನೆಯ ಹಿಂದೆ ಮತ್ತೊಂದು ಬಾವಿ ತೆಗೆದಿದ್ದಾರೆ. ಅಲ್ಲಿ, 65 ಅಡಿ ಆಳದಲ್ಲಿ ನೀರು ದೊರೆತಿದೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, “ಗೌರಿ ಅವರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ” ಎಂದಿದ್ದಾರೆ.