- ಬಸ್‌ನ ನಿರ್ವಾಹಕರಿಗೆ ದಾಬಸ್‌ಪೇಟೆಗೆ ತೆರಳಬೇಕು ಎಂದ ಮಹಿಳೆ
- ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ನಿಗಮ
ಅಂತರರಾಜ್ಯ ಬಸ್‌ನಲ್ಲಿ ಓರ್ವ ಮಹಿಳೆ ಉಚಿತ ಪ್ರಯಾಣ ಬೆಳೆಸಿ, ಬಸ್‌ನ ನಿರ್ವಾಹಕ ಮತ್ತು ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮರುದಿನ ತನ್ನ ಕಡೆಯವರನ್ನು ಕರೆದುಕೊಂಡು ಬಂದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದೂರು ದಾಖಲು ಮಾಡಿದೆ.
ಏನಿದು ಘಟನೆ?
ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-6ರ KA 57 F-1065 ನಂಬರ್ ಬಸ್ ಅನ್ನು ರಾಯದುರ್ಗ-ಬೆಂಗಳೂರು ಅಂತರರಾಜ್ಯ ಮಾರ್ಗಕ್ಕೆ ನಿಯೋಜಿಸಲಾಗಿದೆ. ಈ ಬಸ್ ಅಂತರರಾಜ್ಯದ ಏಕ ಮಾರ್ಗ ರಹದಾರಿಯ ವಾಹನವಾಗಿದೆ. ಮಹಿಳಾ ಪ್ರಯಾಣಿಕರು “ಶಕ್ತಿ” ಯೋಜನೆಯಡಿಯಲ್ಲಿ ಈ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶವಿದೆ.
ಜೂನ್ 20ರಂದು ಬೆಳಗ್ಗೆ 6:30 ಗಂಟೆಗೆ ಓರ್ವ ಮಹಿಳಾ ಪ್ರಯಾಣಿಕರು ದಾಬಸ್‌ಪೇಟೆಗೆ ತೆರಳಲು ಚಳ್ಳಕೆರೆಯಲ್ಲಿ ಈ ಬಸ್ ಹತ್ತಿದ್ದಾರೆ. ಈ ವೇಳೆ, ಬಸ್‌ನ ನಿರ್ವಾಹಕರಿಗೆ ದಾಬಸ್‌ಪೇಟೆಗೆ ತೆರಳಬೇಕು ಎಂದು ಹೇಳಿದ್ದಾರೆ.
ನಿರ್ವಾಹಕರು ಇದು ಅಂತರ ರಾಜ್ಯ ವಾಹನವಾಗಿದ್ದು, ದಾಬಸ್ ಪೇಟೆ ಬಳಿ ನಿಲುಗಡೆ ಇರುವುದಿಲ್ಲ. ನೀವು ತುಮಕೂರಿಗೆ ಬೇಕಾದರೆ ತೆರಳಿ, ಅಲ್ಲಿಂದ ಬೇರೆ ವಾಹನದಲ್ಲಿ ಹೋಗಬಹುದು ಎಂದು ಹೇಳಿದ್ದಾರೆ.
ಇದಕ್ಕೆ ಮಹಿಳೆ ಹಿರಿಯೂರಿಗೆ ಟಿಕೆಟ್ ನೀಡಿ ನಾನು ಅಲ್ಲಿಂದ ಬೇರೆ ಬಸ್‌ನಲ್ಲಿ ದಾಬಸ್‌ಪೇಟೆಗೆ ತೆರಳುತ್ತೇನೆ ಎಂದು ಹೇಳಿ ಟಿಕೆಟ್ ಪಡೆದುಕೊಂಡಿದ್ದಾರೆ. ಮಹಿಳೆ ಹಿರಿಯೂರಿನಲ್ಲಿಯೂ ಇಳಿಯದೆ, ಮತ್ತೊಮ್ಮೆ ತುಮಕೂರಿಗೆ ಟಿಕೆಟ್ ಪಡೆದು ಪ್ರಯಾಣ ಬೆಳೆಸಿದ್ದಾರೆ. ಬಳಿಕ ನಿರ್ವಾಹಕರು ತುಮಕೂರಿನಲ್ಲಿ ಇಳಿಯಲು ತಿಳಿಸಿದ್ದಾರೆ.
ಮಹಿಳೆ ತುಮಕೂರಿನಲ್ಲಿಯೂ ಇಳಿಯದೆ, ಬಸ್‌ನ ಎಲ್ಲ ಪ್ರಯಾಣಿಕರ ಮುಂದೆ ತನ್ನ ಚಪ್ಪಲಿ ತೆಗೆದುಕೊಂಡು ನಾನು ಇಲ್ಲಿ ಇಳಿಯುವುದಿಲ್ಲ ನೀನು ದಾಬಸ್ ಪೇಟೆಗೆ ಹೋಗಬೇಕು ಅಲ್ಲಿಯೇ ನಾನು ಇಳಿಯುವುದು ಎಂದು ನಿರ್ವಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ನಿರ್ವಾಹಕರು ಮಹಿಳೆಯಾಗಿರುವ ಕಾರಣ ಏನೂ ಮಾತನಾಡದೇ, ಅವರ ಹತ್ತಿರಕ್ಕೂ ಹೋಗದೆ, ದಾಬಸಪೇಟೆಗೆ ನಿಲುಗಡೆ ಇಲ್ಲದಿದ್ದರೂ ಸಹ ದಾಬಸ್‌ಪೇಟೆಯ ಫ್ಲೆ ಓವರ್ ಹತ್ತಿರ, ಚಾಲಕರಿಗೆ ತಿಳಿಸಿ ಬಸ್ ನಿಲುಗಡೆ ನೀಡಿ ಮಹಿಳೆಯನ್ನು ಇಳಿಸಿದ್ದಾರೆ ಎಂದು ನಿಗಮ ಮಾಹಿತಿ ನೀಡಿದೆ.
ಮರುದಿನ, ಜೂನ್ 22ರಂದು ಬೆಳಗ್ಗೆ 6:30 ಗಂಟೆಗೆ ಅದೇ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಅದೇ ಚಾಲನಾ ಸಿಬ್ಬಂದಿ ಮೇಲೆ ಚಳ್ಳಕೆರೆ ಸರ್ಕಲ್‌ನಲ್ಲಿ ಬಸ್‌ನ ನಿರ್ವಾಹಕರು ಬಸ್‌ನಿಂದ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಏಕಾಏಕಿ ಮಹಿಳೆಯ ಕಡೆಯವರು ಮೂರು ಮಂದಿ ಬಂದು ನಿರ್ವಾಹಕನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಇದನ್ನು ಗಮನಿಸಿದ ಚಾಲಕರು ನಿರ್ವಾಹಕರನ್ನು ಹಲ್ಲೆಯಿಂದ ತಪ್ಪಿಸಲು ಮುಂದಾದಾಗ ಅವರ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.
ಕೂಡಲೇ ಚಾಲಕ ಮತ್ತು ನಿರ್ವಾಹಕರನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ನಿಗಮದ ಸಿಬ್ಬಂದಿ ಆಸ್ಪತ್ರೆಯಲ್ಲಿಯೇ ಇದ್ದಾರೆ. ನಿರ್ವಾಹಕನ ಎದೆ ಮತ್ತು ಕೊರಳಿಗೆ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಅಥವಾ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ನಿಗಮ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಶಾಲಾ ಮಕ್ಕಳಿಗೆ ಬ್ಯಾಗ್ ಭಾರ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಈ ಸಂಬಂಧ ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ನಿಗಮದ ವತಿಯಿಂದ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದೆ.
ನಿಗಮದ ಚಾಲನಾ ಸಿಬ್ಬಂದಿಗಳಿಗೆ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚನೆ ಹಾಗೂ ತಿಳಿವಳಿಕೆ ನೀಡಲಾಗಿದೆ. ಅದೇ ರೀತಿ ಪ್ರಯಾಣಿಕರು ಸಹ ಚಾಲನಾ ಸಿಬ್ಬಂದಿಗಳೊಂದಿಗೆ ಸಹಕರಿಸಲು ಕೆಎಸ್‌ಆರ್‌ಟಿಸಿ ಕೋರಿದೆ.