ಪ್ರೇಮಿಗಳಿಬ್ಬರು ಊರು ತೊರೆದು ಹೋದದ್ದಕ್ಕೆ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳೆಯ ನೆರವಿಗೆ ಯಾರೊಬ್ಬರೂ ಮುಂದಾಗಿಲ್ಲ. ಇದು ದುಶ್ಯಾಸನ ರಾಜ್ಯವೆಂದು ಹೇಳಿದೆ.
ಬೆಳಗಾವಿಯ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಘಟನೆ ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.
“ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣನಿದ್ದ. ಆದರೆ, ಬೆಳಗಾವಿ ಮಹಿಳೆಯ ನೆರವಿಗೆ ಯಾರು ಬಂದಿಲ್ಲ. ಇದು ದುಶ್ಯಾಸನರ ಕಾಲವಾಗಿದೆ. ಇಲ್ಲಿ ಕಾನೂನಿನ ಭಯವಿಲ್ಲ ಎಂಬ ಸಂದೇಶ ಹೋಗುತ್ತಿದೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
“ಮಗ ಮಾಡಿದ ತಪ್ಪಿಗೆ ತಾಯಿಗೆ ಶಿಕ್ಷೆ ನೀಡಲಾಗಿದೆ. ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ಆ ಸಮಯದಲ್ಲಿ ಸಂತ್ರಸ್ತೆ ಎದುರಿಸಿರುವ ನೋವನ್ನು ಊಹಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
“ಟಿವಿಗಳಲ್ಲಿ ನಡೆಯುವ ಸಂಭಾಷಣೆಯ ವಿರುದ್ಧ ಕ್ರಮಕ್ಕೆ ಮುಂದಾಗುವ ಆಯೋಗ, ಈಗ ಎಲ್ಲಿದೆ. ಮಹಿಳೆಯನ್ನು ಹೀನಾಯವಾಗಿ ಹಿಂಸಿಸಲಾಗಿದೆ. ಆದರೆ, ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿವೆ” ಎಂದು ಕಿಡಿಕಾರಿದೆ.
“ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಅಗತ್ಯವಿದೆ. ಮಹಿಳೆಗೆ ಚಿಕಿತ್ಸೆ ನೀಡಲಾಗಿದೆಯೇ? ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ” ಎಂದು ಎಂಬುದನ್ನು ವರದಿ ನೀಡುವಂತೆ ಅಡ್ವೋಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರಿಗೆ ಸೂಚನೆ ನೀಡಿದೆ.