ಯಾದಗಿರಿ ಜಿಲ್ಲೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಡಾ. ಬಾಬು ಜಗಜೀವನರಾಮ್ ಭೂ ಒಡೆತನ ಯೋಜನೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅಕ್ರಮವೆಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ ಮನವಿ ಪತ್ರ ಸಲ್ಲಿಸಿದೆ.
ಮನವಿ ಪತ್ರದಲ್ಲಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಭೂ ಒಡೆತನ ಯೋಜನೆಯಡಿಯಲ್ಲಿ ಭೂಮಿಯನ್ನು ಒದಗಿಸಿ, ಫಲಾನುಭವಿಗಳನ್ನು ಆರ್ಥಿಕವಾಗಿ ಸದೃಢ ಮಾಡುವುದು ನಿಯಮವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಭೂಒಡೆತನ ಯೋಜನೆಯಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಹಿನ್ನಲೆಯುಳ್ಳ ದಲ್ಲಾಳಿಗಳು ಈ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಲ್ಲಾಳಿಗಳು ಹೇಳಿದ ಹಾಗೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ದಲ್ಲಾಳಿಗಳು ಆಯ್ಕೆ ಮಾಡಿದ ಭೂಮಿಗಳನ್ನು ಅಧಿಕಾರಿಗಳು ಅನುಮೋದನೆ ನೀಡಿ, ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಭೂಮಿಯನ್ನು ನೀಡಿರುತ್ತಾರೆ. ವಾಸ್ತವದ ಸಂಗತಿ ಏನೆಂದರೆ, ಭೂಮಿ ಪಡೆದ ಫಲಾನುಭವಿಗಳು ಸರ್ವೆ ನಂಬರ್‌ಗಳಲ್ಲಿ ಹೋದಾಗ, ಹಳ್ಳ, ಸರ್ಕಾರಿ ಗೈರಾಣ, ಮಡ್ಡಿ, ಕೃಷಿಗೆ ಯೋಗ್ಯವಲ್ಲದ ಭೂಮಿ ತೋರಿಸಿ ಲಕ್ಷಾಂತರ ರೂಪಾಯಿ ಮೇಲೆ ತಿಳಿಸಿದ ನಿಗಮಗಳಿಗೆ ದಲ್ಲಾಳಿಗಳು ಮತ್ತು ಅಧಿಕಾರಿಗಳು ಸೇರಿ ನಷ್ಟ ಉಂಟು ಮಾಡಿದ್ದಾರೆ.
ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿಯಲು ದಲ್ಲಾಳಿಗಳು ಮತ್ತು ಅಧಿಕಾರಿಗಳು ಕಾರಣರಾಗಿದ್ದಾರೆ. ಆದ್ದರಿಂದ 2009ರಿಂದ 2024ರವರೆಗೆ ಸಂಪೂರ್ಣ ಭೂಒಡೆತನ ಯೋಜನೆಯ ದಾಖಲೆಗಳನ್ನು ಸ್ಥಳಗಳೊಂದಿಗೆ ಪರಿಶೀಲನೆ ಮಾಡಿ ಮತ್ತು ಫಲಾನುಭವಿಗಳು ಒಂದೇ ಮನೆಯ ಗಂಡ ಹೆಂಡತಿ, ಅಣ್ಣ ತಮ್ಮ ಇನ್ನೀತರ ಒಂದೇ ಕುಟುಂಬದ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾ ಮೂಲ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಒಂದು ತನಿಖಾ ತಂಡವನ್ನು ನೇಮಿಸಿ, ವರದಿಯ ಮೇಲೆ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರದೀಪ ಅಣಬಿ, ಅಂಬರೀಶ್ ಶಿರವಾಳ, ಮಾಳಪ್ಪ ಪೂಜಾರಿ, ದೇವಪ್ಪ, ಭೋಜಪ್ಪ, ಬಸು ಇನ್ನಿತರರು ಉಪಸ್ಥಿತರಿದ್ದರು.
