ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ಸಂಪರ್ಕ ರಸ್ತೆಗೆ ರೈತರೊಬ್ಬರು ಮುಳ್ಳು ಹಾಕಿ ರಸ್ತೆ ಬಂದ್ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಆಳಂದ-ಶುಕ್ರವಾಡಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದು, ಸಂಪರ್ಕ ರಸ್ತೆ ದುರಸ್ತಿ ಕೈಗೊಳ್ಳದಿದ್ದರೆ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ, ಎಚ್ಚರಿಕೆ ನೀಡಿದರು.
ಆಳಂದ ಪಟ್ಟಣದಿಂದ 7ಕಿ.ಮೀ. ಅಂತರದಲ್ಲಿರುವ ಶುಕ್ರವಾಡಿ ಗ್ರಾಮವು ತಾಲೂಕಿನ ಪುಟ್ಟಗ್ರಾಮಗಳಲ್ಲಿ ಒಂದು. ತಡಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮಕ್ಕೆ ಆಳಂದಕ್ಕೆ ತಲುಪಲು ಹೊನ್ನಳ್ಳಿ ಮಾರ್ಗವಾಗಿ ಸಂಪರ್ಕ ರಸ್ತೆ ಇದೆ. ಆದರೆ, ಕಳೆದ 11 ವರ್ಷದಿಂದ ಹೊನ್ನಳ್ಳಿ–ಶುಕ್ರವಾಡಿ ಮಾರ್ಗದ 3 ಕಿ.ಮೀ ರಸ್ತೆ ದುರಸ್ತಿಗೆ ಸದಾ ಅಡ್ಡಿ ಇದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ ಹೇಳಿದರು.
ಹೊನ್ನಳ್ಳಿ ಗ್ರಾಮದ ರೈತರೊಬ್ಬರು ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಕೋರ್ಟ್ ಮೂಲಕ ತಡೆಯಾಜ್ಞೆ ತಂದ ಹಿನ್ನೆಲೆ ರಸ್ತೆ ದುರಸ್ತಿ ಮಾತ್ರ ಸಾಧ್ಯವಾಗುತ್ತಿಲ್ಲ. ಒಂದು ವಾರದ ಹಿಂದೆ ಮುಖ್ಯರಸ್ತೆ ಮೇಲೆ ಮುಳ್ಳು ಹಾಕಿ ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದ ಶುಕ್ರವಾಡಿ ಗ್ರಾಮಸ್ಥರು ಎರಡು ದಿನ ಆಳಂದ ಪಟ್ಟಣಕ್ಕೆ ತಲುಪಲು ಕಷ್ಟ ಎದುರಿಸಿದರು ಎಂದು ಪ್ರತಿಭಟನಾ ನಿರತರು ದೂರಿದರು.
ಅನಿವಾರ್ಯವಾಗಿ ತಡಕಲ್ ಮಾರ್ಗವಾಗಿ ಸುತ್ತುವರಿದು ಆಳಂದ ಪಟ್ಟಣಕ್ಕೆ ಕ್ರೂಸರ್, ಜೀಪ್ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣವಾಯಿತು. ರಸ್ತೆ ಹಾಳಾದ ಪರಿಣಾಮ ಕಳೆದ 11 ವರ್ಷದಿಂದ ಶುಕ್ರವಾಡಿ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಕ್ರೂಸರ್, ಜೀಪ್ ಮೂಲಕವೇ ಆಳಂದ ಪಟ್ಟಣಕ್ಕೆ ಸಂಚರಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಆಳಂದ ತಹಸೀಲ್ದಾರ್, ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಹೊಲದ ಮಾಲೀಕರೊಂದಿಗೆ ಮಾತನಾಡಿ ತಕ್ಷಣಕ್ಕೆ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸದಿರಲು ಸೂಚಿಸಿದ್ದರಿಂದ, ಕಳೆದ ಮೂರು ದಿನಗಳಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಆರಂಭವಾಗಿದೆ.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಆಳಂದ ಪಟ್ಟಣದಿಂದ ಕೇವಲ 7ಕಿ.ಮೀ ದೂರದಲ್ಲಿ ಇದ್ದರೂ ಗ್ರಾಮಸ್ಥರು ಬಸ್ ಸೌಕರ್ಯ, ವಾಹನ ಸಂಚಾರಕ್ಕೆ ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಹಾಳಾದ ರಸ್ತೆಯಿಂದ ಓಡಾಟಕ್ಕೆ ಸಂಕಷ್ಟ ಇದೆ. ಹೀಗಾಗಿ ಗ್ರಾಮದ ಸಂಪರ್ಕ ರಸ್ತೆಯ ಸಮಸ್ಯೆ ಇತ್ಯರ್ಥಗೊಳ್ಳದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯ: ತಹಸೀಲ್ದಾರ್ಗೆ ಮನವಿ ಸಲ್ಲಿಕೆ
ಶುಕ್ರವಾಡಿಗೆ ರಸ್ತೆ ಸಂಪರ್ಕ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸತತ ಮನವಿಗೂ ಸ್ಪಂದಿಸುತ್ತಿಲ್ಲ. ಅನಿವಾರ್ಯವಾಗಿ ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
