ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಸಣ್ಣ ಸಂಭರ ಗ್ರಾಮಕ್ಕೆ ಸಮರ್ಪಕದ ಕುಡಿಯುವ ನೀರು ಪೂರೈಕೆ ಮತ್ತು ಗ್ರಾಮದಲ್ಲಿ ಸ್ವಚ್ಛತೆಗೆ ಆದಷ್ಟುಬೇಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ, ಸಣ್ಣ ಸಂಭರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಅಲ್ಲದೇ, ಇಡೀ ಗ್ರಾಮವು ಕಸದ ತೊಟ್ಟಿಯಂತಾಗಿದ್ದು, ಹೂಳುತೆಗೆಯದ ಚರಂಡಿಗಳು ವಾಸನೆ ಬರುತ್ತಿವೆ. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಊರು ಕಸದ ತೊಟ್ಟಿಯಂತೆ ಭಾಸವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದ ಸಮಸ್ಯೆಯನ್ನು ಕಂಡು ಕಾಣದಂತಿದ್ದು ನಾವು ಇದನ್ನು ಖಂಡಿಸುತ್ತೇವೆ ಎಂದರು.
ಜೆಜೆಎಂ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಜನರ ತೆರಿಗೆ ಹಣದಲ್ಲಿ ಸರ್ಕಾರ ಜನಪರವಾಗುವ ಕೆಲಸಕ್ಕೆ ಯೋಜನೆ ರೂಪಿಸುತ್ತವೆ. ಆದರೆ, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಮಾತ್ರ ಆಗುವುದಿಲ್ಲ. ತಾಲೂಕಿನಲ್ಲಿ ಈಗಾಗಲೇ ವಾಂತಿ-ಭೇದಿ ಪ್ರಕರಣದಿಂದಾದ ಅನಾಹುತ ಇನ್ನೂ ಮಾಸಿಲ್ಲ. ಇಂತಹದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯಮತ್ತೊಂದು ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಆಗ್ರಹಿಸಿದರು.
ಸಣ್ಣ ಸಂಭ್ರ ಗ್ರಾಮದ ಕುಡಿಯುವ ನೀರು, ಸ್ವಚ್ಛತೆ ಸೇರಿ ಇರುವ ಎಲ್ಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಕ್ರಮ ವಹಿಸಿ. ಈ ಎಲ್ಲ ಸಮಸ್ಯೆಗಳು ಉಲ್ಬಣಿಸಲು ಕಾರಣರಾದ ಎಲ್ಲರ ಮೇಲೂ ಕಠಿಣ ಕ್ರಮ ವಹಿಸಬೇಕು. ಇಲ್ಲವಾದರೆ ನಮ್ಮ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
