ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಅಡಿಯಲ್ಲಿ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಬೇಕು ಹಾಗೂ ಇತರೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಅಖಿಲ
ಭಾರತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ಸಂಯೋಜಿತ ಸುರಪುರ ತಾಲೂಕು ಸಮಿತಿಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮುಖಾಂತರ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಅಧ್ಯಕ್ಷ ದವಲಸಾಬ್ ನದಾಫ್ ಮಾತನಾಡಿ, “ಪ್ರಸ್ತುತ ವರ್ಷದಲ್ಲಿ ಮನರೇಗಾ ಯೋಜನೆ ಅಡಿಯಲ್ಲಿ 10 ರಿಂದ 15 ದಿನಗಳು ಮಾತ್ರ ಕೆಲಸ ನೀಡಿದ್ದು, ಕೆಲಸಕ್ಕಾಗಿ ಫಾರಂ(ನಂ.06) ಕೊಡಲು ಹೋದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, “ಈ ವರ್ಷ ಜಿಲ್ಲಾ ಪಂಚಾಯತಿಯಿಂದ ಕ್ರಿಯಾ ಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ. ಬಂದ ನಂತರ ಕೆಲಸ ಕೊಡುತ್ತೇವೆಂದು ಹೇಳುತ್ತಾರೆ” ಎಂದು ದೂರಿದ್ದಾರೆ.
“ಆಷಾಢ ತಿಂಗಳಲ್ಲಿ ಕೂಲಿಕಾರರಿಗೆ ಕೆಲಸ ಇರುವುದಿಲ್ಲ. ಹಾಗಾಗಿ ಕಚಕನೂರ ಗ್ರಾ.ಪಂ, ಅಲ್ದಾಳ, ಖಾನಾಪುರ ಎಸ್ ಎಚ್, ತಿಂಥಣಿ, ಅಮ್ಮಾಮರ, ಯಕ್ತಾಪುರ, ಸೂಗೂರ, ಏವೂರ, ದೇವಾಪುರ, ಹೆಗ್ಗನದೊಡ್ಡಿ, ದೇವಕ್ಕಲ್, ಕರಡಕಲ್ ಗ್ರಾಮ ಪಂಚಾಯತಿಗಳಿಗೆ ಮಂಜೂರಾತಿ ನೀಡಬೇ” ಎಂದು ಒತ್ತಾಯಿಸಿದರು.
“ಫಾರಂ ನಂ. 6 ಸ್ವೀಕೃತಿ ಕೊಡಬೇಕು. ಫಾರಂ ನಂ.6 ಕೊಟ್ಟರೂ ಉದ್ದೇಶಪೂರ್ವಕವಾಗಿ ಕೆಲಸ ನೀಡದೆ ಕೆವೈಸಿ ಸೇರಿದಂತೆ ಇತರ ಸಮಸ್ಯೆಗಳಿವೆಯೆಂದು ಸುಳ್ಳು ಹೇಳುತ್ತಾ(ಎನ್.ಎಮ್.ಆರ್) ಕೆಲಸಕ್ಕೆ ಹಾಜರಾತಿ ಬರದಂತೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ನಿರುದ್ಯೋಗ ಭತ್ಯೆ ಕೊಡಬೇಕು. ಫಾರಂ ನಂ.6 ಕೊಟ್ಟ ಪ್ರಕಾರ ಕೆಲಸ ಕೊಡಬೇಕು. ಬೇರೆ ಬೇರೆ ಗುಂಪಿನಲ್ಲಿ ಸೇರಿಸಿ ಕೆಲಸ ಕೊಡುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
“ಕೆಲಸ ಮಾಡಿದರೂ ಜ಼ೀರೋ(ಶೂನ್ಯ) ಮಾಡಿದ್ದು, ಅಂಥವರಿಗೆ ಕೂಲಿ ಹಣ ಕೊಡಬೇಕು. ಜಾಬ್ ಕಾರ್ಡ ಕೊಡಬೇಕು. ಹೊಸ ಜಾಬ್ ಕಾರ್ಡ ಮತ್ತು ಡಿಲೀಟ್ ಮಾಡಿದ ಇತರೆ ಸಮಸ್ಯೆಗಳ ಪರಿಹಾರ ಮಾಡಬೇಕು. ಕ್ರಿಯಾ ಯೋಜನೆ ಮಾಡುವಾಗ ಸಮುದಾಯ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಮತ್ತು ಕೂಲಿಕಾರರನ್ನು ಸೇರಿಸಿ ಕ್ರಿಯಾ ಯೋಜನೆ ಮಾಡಬೇಕು. ಮೇಟಗಳ ನೋಂದಣಿ ಮಾಡಿ ಗುರುತಿನ ಚೀಟಿ ಕೊಡಬೇಕು ಮತ್ತು ಗೌರವಧನ ಕೊಡಬೇಕು. ಕೆಲಸದಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಕೆಲಸ ಕೊಡಬೇಕಾದ ಹಳ್ಳಿಗಳಾದ ಆಲ್ದಾಳ, ಆಲ್ಹಾಳ, ಕೋನ್ಹಾಳ ಅಮ್ಲಾಪುರ, ಬೋನಾಳ, ಚಂದ್ಲಾಪುರ, ಗುಡಿಹಾಳ, ಹೆಗ್ಗಣದೊಡ್ಡಿ, ಹೂವಿನಳ್ಳಿ, ಕವಡಿಮಟ್ಟಿ, ಮುಷ್ಠಳ್ಳಿ ನಾಗರಾಳ, ಶಾಂತಪುರ, ಶೆಳ್ಳಗಿ, ಏವೂರ, ಕರಡಕಲ್, ತಳ್ಳಳ್ಳಿ ಗ್ರಾಮಗಳ ಕೂಲಿಕಾರರಿಗೆ ಫಾರಂ ನಂ.6 ಸ್ವೀಕೃತಿ ಕೊಟ್ಟು ಕೆಲಸ ಕೊಡಬೇಕು. ಕೆಲಸಕ್ಕೆ ಕಳಿಸುವಾಗ ಕೆಲಸದ ಹಣ ಎಷ್ಟಿದೆ, ಎಷ್ಟು ಮಾನವ ದಿನಗಳಿಗೆ ಸರಿ ಹೊಂದುತ್ತದೆ ಎಂಬುದನ್ನು ಗಮನಿಸಿ ಹಾಜರಿ ಹಾಕಬೇಕು. ಕೆಲಸ ಮಾಡಿದ ನಂತರ ಹಣ ಕಡಿಮೆ ಇದೆಯೆಂದು ಹೇಳಿ ಕೂಲಿ ಕೊಡದಿರುವ ಮೋಸದ ದೋರಣೆ ನಿಲ್ಲಬೇಕು. ಪ್ರತಿ ತಿಂಗಳಲ್ಲಿ ಕುಂದು ಕೊರತೆಗಳ ಪರಿಹಾರಕ್ಕಾಗಿ ತಾಲೂಕು ಪಂಚಾಯತಿಯಲ್ಲಿ ಸಭೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಇ-ಸ್ವತ್ತು ವಿಚಾರಕ್ಕೆ ದಿನವಿಡೀ ನಡೆದ ಮಾವಿನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ!
ದಾವಲಸಾಬ ನದಾಫ್, ಪ್ರಕಾಶ ಆಲ್ದಾಳ, ಅಯ್ಯಪ್ಪ ಅನ್ಸುರ, ಮಲ್ಲೇಶಿ ಸೋಬಾನ, ಈರಮ್ಮ ಶೆಳ್ಳಗಿ, ವೀರೇಶ ಹಾಳೇರ, ಖಾಜಾಸಾಬ ದಳಪತಿ, ಬಸವರಾಜ ಏವೂರ, ರೇಣುಕಮ್ಮ ಹೆಗ್ಗಣದೊಡ್ಡಿ, ಸಿದ್ದಮ್ಮ ಬೋನ್ಹಾಳ, ಹಣಮಂತ್ರಾಯಗೌಡ ಚಂದ್ಲಾಪೂರ, ಪ್ರಕಾಶ, ಲಕ್ಷ್ಮೀ ಕೋಳೂರು, ಬಸವರಾಜ ಶಾಂತಪೂರ ಸೇರಿದಂತೆ ಇತರರು ಇದ್ದರು.
