ಹಾಸ್ಟೆಲ್ ಕಾರ್ಮಿಕರ ವಜಾ ಖಂಡಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ ಯಾದಗಿರಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
“ಸಮಾಜ ಕಲ್ಯಾಣ ಇಲಾಖೆಯಲ್ಲಿ ಹತ್ತನ್ನೆರಡು ವರ್ಷಗಳಿಂದ ಸೇವೆಯಲ್ಲಿರುವ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಕಾರ್ಮಿಕ ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮಬಾಹಿರವಾಗಿ ಸೇವೆಯಿಂದ ವಜಾ ಮಾಡುತ್ತಿರುವ ಕ್ರಮ ಖಂಡನೀಯ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ ಎನ್ ಮಾತನಾಡಿ, “ಕನಿಷ್ಠ ವೇತನ ಆಧಾರದ ಮೇಲೆ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸುವುದು ಖಂಡನೀಯ. ಯಾವುದೇ ಕಾರ್ಮಿಕ ಕುರಿತು ಆರೋಪಗಳು ಕೇಳಿಬಂದರೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಜಾರಿಯಾದ ನೋಟಿಸ್‌ಗೆ ಉತ್ತರ ನೀಡದಿದ್ದ ಪಕ್ಷದಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಬೇಕು. ಒಟ್ಟಾರೆ ಜಾರಿಯಾದ ಮೂರು ನೋಟಿಸ್‌ಗೆ ಉತ್ತರಿಸದಿದ್ದ ಪಕ್ಷದಲ್ಲಿ ಕಲಸದಿಂದ ವಜಾ ಮಾಡಲು ಅರ್ಹರಿರುತ್ತಾರೆ ಹಾಗೂ ನೋಟಿಸ್‌ಗೆ ಲಿಖಿತವಾಗಿ ಉತ್ತರಿಸಿದರೆ ವಜಾ ಮಾಡಲು ಸಾಧ್ಯವಿರುವುದಿಲ್ಲವೆಂದು ಕಾರ್ಮಿಕ ಕಾಯ್ದೆ ಹೇಳುತ್ತದೆ. ಸರ್ಕಾರದ ಕಾರ್ಮಿಕ ಇಲಾಖೆ ನಿಯಮಗಳನ್ನೇ ಇಲಾಖೆಗಳು ಪಾಲಿಸದಿರುವುದು ವಿಷಾದನೀಯ” ಎಂದು ಬೇಸರ ವ್ಯಕ್ತಪಡಿಸಿದರು.
“ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಮುನ್ನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿ ರಚನೆ ಮಾಡಿ ಆ ಸಮಿತಿಯಲ್ಲಿ ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ತೀರ್ಮಾನಗಳನ್ನು ಕೈಗೊಳ್ಳಬೇಕೆಂಬ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನವಿದ್ದರೂ ಮನಬಂದಂತೆ ವಜಾ ಮಾಡುವುದು ಸರ್ಕಾರದ ಆದೇಶಗಳನ್ನು ಸರ್ಕಾರದ ಅಧಿಕಾರಿಗಳೇ ಉಲ್ಲಂಘನೆ ಮಾಡುತ್ತಿರುವುದು ದೊಡ್ಡ ದುರಂತವಾಗಿದೆ.
ಹಾಗಾಗಿ ನಿಯಮಬಾಹಿರವಾಗಿ ವಜಾ ಮಾಡಲಾದ ಕಾರ್ಮಿಕರನ್ನು ಕೂಡಲೇ ಪುನಃ ಸೇವೆಗೆ ನಿಯೋಜಿಸುವ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶೋಷಿತರನ್ನು ಶೋಷಣೆಯಿಂದ ಮುಕ್ತಗೊಳಿಸುವುದು ಜನಪರ ಚಳವಳಿಗಾರರ ಜವಾಬ್ದಾರಿ: ಡಾ. ಭೀಮಪ್ಪ
ಮನವಿ ಸ್ವೀಕರಿಸಿದ ಅಧಿಕಾರಿ ಮಾತನಾಡಿ, “ಎರಡು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ವಜಾಗೊಳಿಸಲಾದ ಕಾರ್ಮಿಕರನ್ನು ಬೇರೊಂದು ವಸತಿನಿಯಲಕ್ಕೆ ಸೇವೆಗೆ ನಿಯೋಜಿಸಲಾಗುವುದು” ಎಂದು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯಿಂದ ಪ್ರತಿಭಟನಾಕಾರರು ಹೋರಾಟವನ್ನು ಹಿಂಪಡೆದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣಪ್ಪ ಜಿ ತೆಳಿಗೇರಿಕರ್, ಜಿಲ್ಲಾ ಉಪಾಧ್ಯಕ್ಷೆ ಮರಳಮ್ಮ ದಾಸನಕೇರಿ, ಭೀಮಾಶಂಕರ ನಾಯ್ಕಲ್, ಶ್ರೀಕಾಂತ್ ಚಿಕ್ಕಮೇಟಿ, ಶಾಮಪ್ಪ, ನರಸಪ್ಪ, ಆನಂದಪ್ಪ, ಶಿವಪ್ಪ, ಕಾಶಪ್ಪ, ನಾಗಮ್ಮ, ಆಶಮ್ಮ, ಭೀಮಬಾಯಿ, ಇಂದ್ರಮ್ಮ, ರೇಣುಕಾ, ನಿಂಗಮ್ಮ, ಪದ್ಮಮ್ಮ ಸೇರಿದಂತೆ ಇತರರು ಇದ್ದರು.