ಅತ್ಯಾಚಾರ ಆರೋಪದ ಮೇಲೆ ಪ್ರಬಲ ಜಾತಿ ಯುವಕನ ವಿರುದ್ಧ ಪೋಕ್ಸೊ ಪ್ರಕರಣದ ಅಡಿ ಕೇಸ್ ಮಾಡಿದ್ದರಿಂದ ಬಪ್ಪರಗಿ ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿರುವ ಸವರ್ಣೀಯರ ವಿರುದ್ಧ ಕ್ರಮ ಕೈಗೊಂಡು ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ (ಕ್ರಾಂತಿಕಾರಿ) ಯಾದಗಿರಿ ಜಿಲ್ಲೆ ಶಾಖೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಗಳು ಜಂಟಿಯಾಗಿ ಹುಣಸಗಿ ಪಟಣ್ಣದ (ಬಸವೇಶ್ವರ) ವೃತ್ತದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ, ಸುರಪುರ ಆರಕ್ಷಕ ಉಪಾಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, “ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಪ್ಪರಗಿ ಗ್ರಾಮದ ದಲಿತ(ಮಾದಿಗ) ಜನಾಂಗದ 12 ವರ್ಷದ ಬಾಲಕಿಯನ್ನು ಐದು ತಿಂಗಳ ಗರ್ಭಿಣಿಯನ್ನಾಗಿ ಮಾಡಿದವನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸವರ್ಣೀಯರು ಅಲ್ಲಿನ ದಲಿತ ಕುಟುಂಗಳಿಗೆ ಬಹಿಷ್ಕಾರ ಹಾಕಿದ್ದಾರೆ” ಎಂದರು.

“ಬಹಿಷ್ಕಾರಕ್ಕೆ ಸಂಬಂಧಪಟ್ಟಂತೆ 10 ಮಂದಿ ಸವರ್ಣೀಯರ ವಿರುದ್ಧ ಪ್ರಕರಣ ದಾಖಲಿಸಿದ್ದು, ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಡೇಕಲ್ ಗ್ರಾಮದ 15 ವರ್ಷದ ದಲಿತ ಯುವತಿಯ ಮೇಲೆ ಅದೇ ಗ್ರಾಮದ ಮೂವರು ಮೇಲ್ವರ್ಗದವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಮೂವರ ವಿರುದ್ಧ ಪೋಕ್ಸೊ ಅಡಿ ಕೇಸ್ ದಾಖಲಾಗಿದ್ದರೂ ಅವರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಮೂವರು ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದು, ʼಮಾಜಿ ಸಚಿವ ರಾಜುಗೌಡರು ನಮ್ಮ ಬೆಂಬಲಕ್ಕಿದ್ದಾರೆ. ಈ ಮಾದಿಗ ಜನಾಂಗದ ಬೋಳಿಮಕ್ಕಳು ನಮ್ಮನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ. ಹೆಚ್ಚಿಗೆ ಧಮ್ಕಿ ಹಾಕಿಸಿದರೆ ಕೊಲೆ ಮಾಡಿ ದಕ್ಕಿಸಿಕೊಳ್ಳುತ್ತೇವೆʼ ಎನ್ನುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಹಾಗಾಗಿ ತುರ್ತಾಗಿ ಈ ಮೂವರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ಬಪ್ಪರಗಿ ಗ್ರಾಮದ 12ವರ್ಷದ ದಲಿತ ಯುವತಿಯನ್ನು ಐದು ತಿಂಗಳ ಗರ್ಭೀಣಿಯನ್ನಾಗಿ ಮಾಡಿದ ಬಗ್ಗೆ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರಿಂದ ಬಪ್ಪರಗಿ ಗ್ರಾಮದ 10 ದಲಿತ ಕುಟುಂಬಗಳಿಗೆ ಆ ಗ್ರಾಮದ ಪ್ರಮುಖರು ಸಾಮಾಜಿಕ ಬಹಿಷ್ಕಾರ ಹಾಕಿ ದಲಿತ ಕುಟುಂಬಗಳಿಗೆ ಅನ್ಯಾಯ, ಮೋಸ ಮಾಡಿರುವುದು ಖಂಡನೀಯ” ಎಂದರು.
“ಅತ್ಯಾಚಾರಕ್ಕೆ ಪ್ರಯತ್ನಪಟ್ಟವರೆಲ್ಲರೂ ಸುರಪುರ ತಾಲೂಕಿನ ಮಾಜಿ ಶಾಸಕ ರಾಜುಗೌಡರ ಬೆಂಬಲಿಗರಾಗಿದ್ದು, ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಕೇಸ್ ದಾಖಲು ಮಾಡಿದರೂ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ” ಎಂದು ದೂರಿದರು.
“ಶಾಸಕನ ಬೆಂಬಲವಿದೆಯೆಂಬ ಅಹಂಕಾರದಿಂದ ನಿತ್ಯವೂ ಸಂತ್ರಸ್ತೆ ಅಪ್ರಾಪ್ತ ಬಾಲಕಿಯ ಮನೆಯವರಿಗೆ ಅವಾಚ್ಯ ಶಬ್ದದಗಳಿಂದ ನಿಂದಿಸುತ್ತಿದ್ದು, ನಮ್ಮ ವಿರುದ್ದ ನೀವು ಎಷ್ಟೇ ಪ್ರತಿಭಟನೆ ಮಾಡಿದರೂ ನಮ್ಮನ್ನೇನೂ ಮಾಡಲು ಸಾಧ್ಯವಾಗುವುದಿಲ್ಲವೆಂದು ಹೇಳುತ್ತ ಜೀವ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಅರೋಪಿಗಳನ್ನು ಬಂಧಿಸಿ ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆ ನೀಡಿ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಬಪ್ಪರಗಿ ಗ್ರಾಮದ ಬಹಿಷ್ಕಾರಕ್ಕೊಳಗಾದ 10 ದಲಿತ ಕುಟುಂಬಗಳಿಗೆ ಪ್ರತಿಯೊಂದು ಕುಟುಂಬಕ್ಕೆ ನಾಲ್ಕು ಎಕರೆಯಂತೆ ಜಮೀನು ಕೊಡಿಸಬೇಕು. ಮಾದಿಗ ಜನಾಂಗದವರಿಗೆ ಸ್ವಯಂ ಉದ್ಯೋಗದ ಅಡಿ ಕಿರಾಣಿ, ಹೊಟೇಲ್, ಹಿಟ್ಟಿನ ಗಿರಣಿ, ಚಪ್ಪಲಿ ಅಂಗಡಿ ಮಂಜೂರಿ ಮಾಡಿ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
“ಕೊಡೇಕಲ್ ಗ್ರಾಮದ ಸಂತ್ರಸ್ತೆ ಅಪ್ರಾಪ್ತೆ ಕುಟುಂಬಕ್ಕೆ ನಿಗಮದಿಂದ ನಾಲ್ಕು ಎಕರೆ ಜಮೀನು ಕೊಟ್ಟು, ಉದ್ಯೋಗ ಮಾಡಲು ಸಾಲಾ ಮಂಜೂರು ಮಾಡಿ ಅನುಕೂಲ ಮಾಡಿಕೊಡಬೇಕು. ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚನ್ನೂರು ಕೆ. ಗ್ರಾಮದಲ್ಲಿ ದಲಿತರ ಮೇಲೆ ಕೌಂಟರ್ ಸುಳ್ಳು ಕೇಸ್ ಮಾಡಿದ್ದನ್ನು ರದ್ದುಪಡಿಸಿ ಗುರುಮಿಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅರಕೇರಾ ಕೆ. ಗ್ರಾಮದ ದಲಿತರ ಮೇಲೆ ಹಾಕಿದ ಸುಳ್ಳು ಕೇಸನ್ನು ರದ್ದುಪಡಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಜೀಜ್ ಸಾಬ್ ಐಕೂರ್, ಮಲ್ಲಿಕಾರ್ಜುನ ಕುರುಕುಂದಿ, ನಾಗರಾಜ ಓಕಳಿ, ನಿಂಗಣ್ಣ ಎನ್ ಗೋನಾಲ, ರಮೇಶ್ ಪೂಜಾರಿ, ಮಾನಪ್ಪ ಶೆಳ್ಳಗಿ, ರಾಮಪ್ಪ ಕೋರೆ, ಭೀಮಣ್ಣ ಅಡ್ಡೂಡಗಿ, ಗೋಪಾಲ ಗೋಗಿಕೇರಾ, ಚಂದ್ರಮ ದೀವಳಗುಡ್ಡ, ಬಸವಣ್ಣ ದೊಡ್ಡಮನಿ, ಭೀಮಣ್ಣ ಲಕ್ಷ್ಮೀಪುರ, ತಿಪ್ಪಣ ಗೋನಾಲ, ಹುಲಗಪ್ಪ ಜಾಂಗೀರ, ಹೊನ್ನಪ್ಪ ದೇವಿಕೇರಿ ಸೇರಿದಂತೆ ಇತರರು ಇದ್ದರು.