ಪ.ಜಾತಿ ಮತ್ತು ಪ ಪಂಗಡ ಸಮುದಾಯದ ಹಣದ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ ಹಾಗೂ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ರಾಜ್ಯ ಸರ್ಕಾರ ಮತ್ತು ಕೆಂದ್ರ ಸರ್ಕಾರದ ವಿರುದ್ಧ ಹುಣಸಗಿಯ ಪ.ಜಾತಿ, ಪ.ಪಂಗಡ ಸಾಮೂಹಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಬಿ.ಆರ್ ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ಹುಣಸಗಿ ತಹಶೀಲ್ದಾರ್ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ದೇವಿಂದ್ರಪ್ಪ ಬಳಿಚಕ್ರ ಮಾತನಾಡಿ, “ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ಬೇರೆ ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಗಾಯಿಸಿದ್ದು, ಅದನ್ನು ಹಿಂದಿರುಗಿಸಬೇಕು. ಸಂಬಂಧಪಟ್ಟ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ವಾಲ್ಮೀಕಿ ನಿಗಮದ ಹಣ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆಯಾದ ಕುರಿತು ತನಿಖೆ ಮತ್ತು ತಪ್ಪಿತಸ್ಥ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ರಾಮನಗರದಲ್ಲಿ ದಲಿತ ವ್ಯಕ್ತಿಯ ಕೈ ಕತ್ತರಿಸಿದವರಿಗೆ ಬಂಧನ ಮತ್ತು ಶಿಕ್ಷೆಯಾಗಬೇಕು. ಯಾದಗಿರಿ ನಗರದ ಪಿಎಸ್‌ಐ ಪರಶು ರಾಮ್ ಅವರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು” ಎಂದು ಆಗ್ರಹಿಸಿದರು.

ಕೆಂದ್ರ ಮತ್ತು ರಾಜ್ಯ ಸರ್ಕಾರ ದಲಿತ ಸಮುದಾಯಗಳಾದ ರೈತರು, ಕೃಷಿ ಕಾರ್ಮಿಕರು, ಮಹಿಳಾ ಕಾರ್ಮಿಕರು, ದೀನ ದಲಿತರು, ವಿದ್ಯಾರ್ಥಿಗಳು ಕಟ್ಟಡ ಕಾರ್ಮಿಕರಿ ಆಗಿರುವ ಅನ್ಯಾಯವನ್ನು ಸರಿದೂಗಿಸಲು ವಿಶೇಷ ಪ್ಯಾಕೇಜ್ ಮುಖಾಂತರ ಹಣ ಮಂಜೂರು ಮಾಡಿ ಅಭಿವೃದ್ಧಿ ಮಾಡಬೇಕು ಎಂದು ಇದೇ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು.
ದಲಿತ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ರಾಜ್ಯಾದಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುದಣ್ಣ ದೊರೆ ಹುಣಸಗಿ, ಶರಣಪ್ಪ ತೆಗ್ಗೆಳ್ಳಿ, ಜುಮಣ್ಣ ಬಲಶೇಟ್ಟಿಹಾಳ, ವಿರೇಶ್ ಗುಳಬಾಳ, ಶಿವು ರಾಠೋಡ, ಬಸವರಾಜ ಹಗರಟಗಿ, ಚಂದ್ರಶೇಖರ ಹಳ್ಳೂರ, ಗುರುಪುತ್ರ ಹೊಸಮನಿ, ರಾಜ ವಜ್ಜಲ, ಸಿದ್ದು ಮೇಲಿನಮನಿ, ಕಾಶಿನಾಥ ಹಾದಿಮನಿ, ಪರಮಣ್ಣಿ ಕನ್ನಳ್ಳಿ, ನಾಗಯ್ಯ ಹುಣಸಗಿ, ಯಲ್ಲಪ್ಪ ಕಡದರಗಡ್ಡಿ, ಪ್ರಬು ಕಚನೂರ, ಮಲ್ಲಣ್ಣ ಹೆಬ್ಬಾಳ್ ಹುಣಸಗಿ, ಭೀಮನಗೌಡ ಪ್ರೋ. ಪಾಟೀಲ್, ಸಿದ್ದಣ್ಣ ಮೇಲಿನಮನಿ ಇನ್ನಿತರರು ಉಪಸ್ಥಿತರಿದ್ದರು.
