ಅಕ್ಟೋಬರ್ 25ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಶೀಘ್ರ ಅನುಷ್ಠಾನ ಮಾಡಬೇಕು. ದಲಿತ, ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ. 50ರಿಂದ ಶೇ 75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯಾದಗಿರಿಯಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮುಖಂಡರು, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿಗಣತಿ (ಸಾಮಾಜಿಕ ಆರ್ಥಿಕ ಗಣತಿ) ವರದಿಯನ್ನು ಸ್ವೀಕರಿಸಿದ್ದು ಅಭಿನಂದನಾರ್ಹ. ಕೂಡಲೇ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ದಸಂಸ ಮುಂಖಡ ಮರೆಪ್ಪ ಚಟ್ಟೇರಕರ್ ಮಾತನಾಡಿ, ಅಕ್ಟೋಬರ್ 25ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಶೀಘ್ರ ಅನುಷ್ಠಾನಕ್ಕಾಗಿ ಆಗ್ರಹಿಸಿ ಹಾಗೂ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ.50 ರಿಂದ ಶೇ.75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
“ಇತ್ತೀಚೆಗೆ ಸರ್ಕಾರವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿದ್ದನ್ನು ದಲಿತ ಸಂಘರ್ಷ ಸಮಿತಿಯು ಸ್ವಾಗತಿಸಿ ಅಭಿನಂದನೆ ಸಲ್ಲಿಸುತ್ತದೆ” ಎಂದರು.
ಜಾತಿ ಜನಗಣತಿ ವರದಿ ಸ್ವೀಕಾರಗೊಂಡ ಕೂಡಲೇ ಕೆಲವು ಪಟ್ಟಭದ್ರರು ಹಾಗೂ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ತೀವ್ರ ಅಸಮಾಧಾನ ಹೊರಹಾಕಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಳವಳಕಾರಿ ಸಂಗತಿ. ಈ ಪಟ್ಟಭದ್ರ ಜಾತಿವಾದಿಗಳು ಜಾತಿಗಣತಿ ವರದಿ ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ. ಸಾಮಾಜಿಕ ನ್ಯಾಯ ವಿರೋಧಿಯಾದ ಅಸಮಾಧಾನ, ವಿರೋಧ, ಪ್ರತಿಭಟನೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಸಾಮಾಜಿಕ ನ್ಯಾಯದ ಪರವಾಗಿ ದೃಢ ನಿಲುವು ತಾಳಬೇಕೆಂದು” ಮನವಿ ಮಾಡಿದರು.

“ಈ ಜಾತಿ ಜನಗಣತಿ ವರದಿಯ ಅಂಕಿ – ಅಂಶಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಈಗಿರುವ ಶೇ.50 ರಷ್ಟು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ಕರ್ನಾಟಕ ರಾಜ್ಯದ ಸಾಮಾಜಿಕ ನ್ಯಾಯ’ದ ಪರಂಪರೆಯನ್ನು ತಾವು ಮತ್ತು ತಮ್ಮ ಸರ್ಕಾರ ಮತ್ತೊಮ್ಮೆ ಎತ್ತಿ ಹಿಡಿದು ದೇಶಕ್ಕೇ ಮಾದರಿ ಆಡಳಿತ ನೀಡುವಿರೆಂದು ನಂಬುತ್ತೇವೆ” ಎಂದರು.
ನಂತರ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾನಪ್ಪ ಕಟ್ಟಿಮನಿ, ಗೋಪಾಲ ತಳಗೇರಿ, ಹೊನ್ನಪ್ಪ ನಾಟೇಕಾರ್, ಬಸವರಾಜ ಗುಡಿಮನಿ, ಭೀಮರಾಯ, ಸೈದಪ್ಪ ಕೂಲೂರು, ಪರಶುರಾಮ ಒಡೆಯರ್, ಬಸವರಾಜ, ಸಂಪತ್ ಚಿನ್ನಾಕಾರ, ಮರಿಲಿಂಗ ಕುರಕುಂಬಳ, ನಾಗರಾಜ, ಕೂಲುರ, ಬಸವರಾಜ, ಅಪ್ಪಣ ಹಳಗೇರಿ, ವಿಶಾಲ್ ಕೌಳೂರ್, ಶ್ರೀಕಾಂತ ತಲಾರಿ, ಭೀಮರಾಯ ಸುಂಗಲಕರ್, ಮಲ್ಲಿನಾಥ ಸುಂಗಲಕರ್, ವಸಂತ ಸುಂಗಲಕರ್, ವಿಜಯ ಆಶನಾಳ, ಅಂಬರೀಶ್ ಚಟ್ಟೇರಕರ್, ಪಿಂಟು ದಾಸನಕೇರಿ, ಜೈಭೀಮ್ ಕೂಲ್ಲೂರಕರ್, ಶಿವಶಂಕರ ಬಂದಳ್ಳಿ, ಮಲ್ಲು ಕೌಳೂರ್, ಭೀಮರಾಯ ಯಂಡಳ್ಳಿ, ಬಸು ಬೋಳಾರಿ, ಲಾಲಪ್ಪ ತಲಾರಿ ಇನ್ನಿತರರು ಉಪಸ್ಥಿತರಿದ್ದರು.
