ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದ್ದು, ಕರಾಳ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸುರಪುರ ತಾಲೂಕು ಕಾರ್ಯಾಧ್ಯಕ್ಷ ಇಲಿಯಾಸ್ ಪಟೇಲ್ ಬಳಗಾನೂರ ಹೇಳಿದರು.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ರಾಜ್ಯದಲ್ಲಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಿದ್ದು, ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಸಿದ್ದರಾಮಯ್ಯನವರ ಸರ್ಕಾರ ಹೊರಡಿಸಿರುವ ಆದೇಶ ತಾರತಮ್ಯ ಹಾಗೂ ಅವೈಜ್ಞಾನಿಕಗಿದೆ. ಸರ್ಕಾರ ಸಮಸ್ತ ಪತ್ರಕರ್ತರ ಕಿವಿಗೆ ಹೂವು ಮುಡಿಸುವ ಕಾರ್ಯದಲ್ಲಿ ತೊಡಗಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ಈ ಕರಾಳ ಆದೇಶಕ್ಕೆ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡೂವರೆ ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ವಾರ್ಷಿಕ 1800 ಕೋಟಿ ರೂಗಳನ್ನು ವ್ಯಯ ಮಾಡಿ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್ ಪಾಸ್ ಅದೂ ಆಧಾರಕಾರ್ಡ್ ಎಂಬ ಮಾನದಂಡ ಹೊಂದಿದ್ದರೆ ಸಾಕೆಂಬ ನಿಯಮ ವಿಧಿಸಿರುವ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೇವಲ 16 ಕೋಟಿ ರೂಗಳ ವೆಚ್ಚದಲ್ಲಿ ಜಾರಿಮಾಡುತ್ತಿರುವ ಗ್ರಾಮಾಂತರ ಪತ್ರಕರ್ತರಿಗೆ ಇಷ್ಟೆಲ್ಲಾ ಮಾನದಂಡಗಳು ಬೇಕಿತ್ತಾ, 7 ಕೋಟಿ ಜನರ ನಾಡಿಮಿಡಿತ ಅರಿತಿರುವ ತಾವು 15 ಬಡ್ಜೆಟ್ ಮಂಡಿಸಿರುವ ತಮಗೆ ಕೇವಲ 12,000 ಮಂದಿ ಗ್ರಾಮಾಂತರ ಪತ್ರಕರ್ತರ ಕಷ್ಟ ಸುಖ ನೋವನ್ನು ಅರಿಯುವುದರಲ್ಲಿ ವಿಫಲರಾಗಿದ್ದೀರಾ. ರಾಜ್ಯದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜ ತಿದ್ದುವ ಹಾಗೂ ಸಾರ್ವಜನಿಕರು ಸರ್ಕಾರದ ಮಧ್ಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಹನ್ನೆರೆಡು ಸಾವಿರ ಮಂದಿ ಪತ್ರಕರ್ತರಿಗೆ ಯಾವುದೇ ಯೋಜನೆಗಳಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.