ಮಗುವಿನ ಚಿಕ್ಕಪ್ಪ ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯೋರ್ವಳು ಎರಡು ತಿಂಗಳ ಹೆಣ್ಣು ಮಗುವನ್ನೇ ಬಾವಿಗೆ ಎಸೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಹಸುಗೂಸನ್ನು ಕೊಲೆ ಮಾಡಿದ ಅಪ್ರಾಪ್ತೆಯನ್ನು ಯಾದಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್ ಮತ್ತು ಚಿಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿ ಸಾವನ್ನಪ್ಪಿದೆ.
ಆರೋಪಿ ಅಪ್ರಾಪ್ತೆ ಮಗುವಿನ ಚಿಕ್ಕಪ್ಪ ಯಲ್ಲಪ್ಪನ ಬಳಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾಳೆ. ಯಲ್ಲಪ್ಪ ಆಕೆಯನ್ನು ತಿರಸ್ಕರಿಸಿದ್ದ. ಆದರೆ ಆರೋಪಿ ಬಾಲಕಿ ಆತನಿಗೆ ಪ್ರಪೋಸ್ ಮಾಡುತ್ತಲೇ ಇದ್ದಳು. ಯಲ್ಲಪ್ಪ ನಿರಾಕರಿಸಿದ್ದರಿಂದ ಕುಪಿತಳಾದ ಅಪ್ರಾಪ್ತ ಬಾಲಕಿ, ಕಳೆದ ಜುಲೈ 6ರಂದು ಬೆಳಗ್ಗೆ ನಾಗೇಶ್ ಅವರ ಮನೆಗೆ ತೆರಳಿದ್ದಳು. ಈ ವೇಳೆ ನಾಗೇಶ್ ಅವರು ಕೆಲಸಕ್ಕೆ ಹೋಗಿದ್ದರೆ, ಮಗುವಿನ ತಾಯಿ ಚಿಟ್ಟೆಮ್ಮ ಶೌಚಾಲಯಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಅಪ್ರಾಪ್ತ ಬಾಲಕಿ, ಇದೇ ಸಮಯ ದುರುಪಯೋಗಪಡಿಸಿಕೊಂಡಿದ್ದಾಳೆ.
ತನ್ನ ಪ್ರೀತಿ ನಿರಾಕರಿಸಿದ್ದ ಯಲ್ಲಪ್ಪನ ಅಣ್ಣನ ಮಗು ಮೀನಾಕ್ಷಿಯನ್ನು ಎತ್ತಿಕೊಂಡು ಹೋಗಿ ಬಾವಿಗೆ ಎಸೆದಿದ್ದಾಳೆ. ‘ಮಗುವಿನ ಕೊಲೆ ಆರೋಪ ಯಲ್ಲಪ್ಪನ ಮೇಲೆ ಬಂದು, ಆತ ಜೈಲಿಗೆ ಹೋಗಲಿ ಎಂಬುದು ಆಕೆಯ ಉದ್ದೇಶವಾಗಿತ್ತು.

ಬಳಿಕ ಮೀನಾಕ್ಷಿಯನ್ನು ಆತನ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮಗು ಕಾಣದಿದ್ದಾಗ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದ್ದಾರೆ. ಅವರೊಂದಿಗೆ, ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಿದೆ. ಅಲ್ಲದೇ, ಬಾಲಕಿ ಮಗುವನ್ನು ಎತ್ತಿಕೊಂಡು ಹೋಗಿರುವುದನ್ನು ಗ್ರಾಮದ ಕೆಲವರು ನೋಡಿದ್ದನ್ನು ಪೋಲಿಸರಿಗೆ ತಿಳಿಸಿದ್ದಾರೆ.
ತನಿಖೆ ಕೈಗೆತ್ತಿಕೊಂಡ ಯಾದಗಿರಿ ನಗರ ಪೊಲೀಸರು, ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.
“ಮಗುವಿನ ಚಿಕ್ಕಪ್ಪನನ್ನು ಪ್ರೀತಿಸುತ್ತಿದ್ದೆ. ಆದರೆ ಅವನು ನನ್ನನ್ನು ತಿರಸ್ಕರಿಸಿದ್ದರಿಂದ ನನಗೆ ಸಿಟ್ಟು ಬಂದಿತ್ತು. ಈ ಸಿಟ್ಟಿನಿಂದ ನಾಗೇಶ್-ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿಯನ್ನು ಬಾವಿಯೊಳಗೆ ಹಾಕಿದ್ದೇನೆ. ಮಗುವಿನ ಕೊಲೆ ಆರೋಪ ಯಲ್ಲಪ್ಪನ ಮೇಲೆ ಬಂದು, ಆತ ಜೈಲಿಗೆ ಹೋಗಲಿ ಎಂಬುದು ನನ್ನ ಉದ್ದೇಶವಾಗಿತ್ತು” ಎಂಬುದನ್ನು ಆರೋಪಿ ಒಪ್ಪಿಕೊಂಡಿರುವುದಾಗಿ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಾಲಕಿ, ಯಲ್ಲಪ್ಪನ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದಳು ಎಂದು ಯಾದಗಿರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಯಾದಗಿರಿ ನಗರ ಪೊಲೀಸರು ಸ್ಥಳ ಮಹಜರು ನಡೆಸಿ, ಅಪ್ರಾಪ್ತೆಯನ್ನು ಬಂಧಿಸಿದ್ದಾರೆ.
