ರಸ್ತೆ ಅಗಲೀಕರಣ ಮಾಡದೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬಾರದು. ಮೊದಲು ರಸ್ತೆ ವಿಸ್ತರಣೆ ಹಾಗೂ ಚರಂಡಿ ನಿರ್ಮಿಸಿ ಬಳಿಕ ಸಿಸಿ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ), ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ ಎಚ್ಚರಿಕೆ ನೀಡಿವೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸುರಪುರದ ಡಾ. ಬಿ.ಆರ್. ಅಂಬೇಡ್ಕರ್ ನಗರದಿಂದ ಬುದ್ಧ ವಿಹಾರ ಹಾಗೂ ಸಾಬಣ್ಣ ಅಂಗಡಿಯವರೆಗೆ ರಸ್ತೆ ಅಗಲೀಕರಣ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕೆ ಹಿಂದಿನ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಅನುದಾನ ಮಂಜೂರು ಮಾಡಿದ್ದರು. ಪ್ರಸ್ತುತ ಲ್ಯಾಂಡ್ ಆರ್ಮಿ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಗಲೀಕರಣ ಪೂರ್ಣಗೊಳಿಸದೆ ಕೆಲವು ಭಾಗಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಆರಂಭಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಅಸ್ಸಾರ್ ಮೊಹಲ್ಲಾ ಸಮೀಪ ಕೆಲವರು ರಸ್ತೆ ಅತಿಕ್ರಮಿಸಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲು ಅತಿಕ್ರಮಣ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ, ಕನಿಷ್ಠ 15 ಅಡಿ ಅಗಲದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ನಗರಸಭೆ ಅಧಿಕಾರಿಗಳು, ತಹಶೀಲ್ದಾರ್, ಡಿವೈಎಸ್ಪಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಮಧ್ಯಪ್ರವೇಶಿಸಿ, ಬುದ್ಧ ವಿಹಾರದಿಂದ ಸರ್ಕಾರಿ ಪ್ರೌಢಶಾಲೆ ಹಿಂಭಾಗದ ಸಾಬಣ್ಣ ಅಂಗಡಿಯವರೆಗೆ ಸಮಗ್ರ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದರು.
ಒಂದು ವೇಳೆ ರಸ್ತೆ ಅಗಲೀಕರಣ ಮಾಡದೆ ಸಿಸಿ ರಸ್ತೆ ಕಾಮಗಾರಿ ಮುಂದುವರಿಸಿದರೆ ತಾಲೂಕು ಆಡಳಿತದ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿತು.
ಇದನ್ನು ಓದಿದ್ದೀರಾ? ಕಲಬುರಗಿ | ಸೋನಮ್ ವಾಂಗ್ಚುಕ್ ಬಂಧನ ಖಂಡಿಸಿ; ಮೋದಿ, ಧರ್ಮೇಂದ್ರ ಪ್ರಧಾನ ಪ್ರತಿಕೃತಿ ದಹಿಸಿ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪೂರ, ಜಿಲ್ಲಾ ಮುಖಂಡರಾದ ಮಹಾದೇವಪ್ಪ ಬಿಜಾಸಪೂರ, ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್, ತಾಲೂಕು ಸಂಚಾಲಕರಾದ ಬಸವರಾಜ ಶೆಳ್ಳಗಿ, ಮರೆಪ್ಪ ಕಾಂಗ್ರೆಸ್, ರೇವಣಸಿದ್ದಪ್ಪ ಮಾಲಗತ್ತಿ, ಖಾಜಾಹುಸೇನ ಗುಡಗುಂಟಿ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





