ಬ್ಯಾಂಕ್ ಆಫ್ ಬರೋಡದ 119ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಉದ್ಯಮಿಗಳು ಬ್ಯಾಂಕಿನ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ನಗರದ ನಾಗೇನಹಳ್ಳಿ ರಿಂಗ್ ರಸ್ತೆಯ ಹೋಟೆಲ್ ಬೃಂದಾವನ ಗ್ರ್ಯಾಂಡ್ನ ‘ಬಲ್ ದೇವ್’ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ಮುಖ್ಯಸ್ಥ ಅಮಿತ್ ಶೆಟ್ಟಿ ಹಾಗೂ ಪ್ರಾದೇಶಿಕ ಉಪ ಮುಖ್ಯಸ್ಥ ಭೀಮಾಶಂಕರ್ ಅವರಿಗೆ ಕಡೇಚೂರ್ ಗ್ರೂಪ್ ಆಫ್ ಹೋಟೆಲ್ಸ್ ಹಾಗೂ ನಗರದ ಉದ್ಯಮಿಗಳ ಪರವಾಗಿ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಲಾಯಿತು. ಬಳಿಕ ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಇದೆ ವೇಳೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಮಾತನಾಡಿ, ‘ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನದ ಬಳಿಕ ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಜೊತೆಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸುಮಾರು 54 ಶಾಖೆಗಳ ಮೂಲಕ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ’ ಎಂದು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿಯೂ ರಾಷ್ಟ್ರದ ಆರ್ಥಿಕ ಪ್ರಗತಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ನೀಡುವಂತೆ ಶುಭ ಹಾರೈಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ರಸ್ತೆ ಅಗಲೀಕರಣವಿಲ್ಲದೆ ಸಿಸಿ ರಸ್ತೆ ಕಾಮಗಾರಿ ಬೇಡ: ದಲಿತ ಸಂಘರ್ಷ ಸಮಿತಿ ಎಚ್ಚರಿಕೆ
ಕಾರ್ಯಕ್ರಮದಲ್ಲಿ ಕಡೇಚೂರ್ ಗ್ರೂಪ್ನ ನಿರ್ದೇಶಕ ಮಹೇಶ್ ಕಡೇಚೂರ್, ಉದ್ಯಮಿ ಸಾಹಿಲ್ ಜೈನ್, ಜನರಲ್ ಮ್ಯಾನೇಜರ್ ಚೆನ್ನಬಸವ ತೊರವಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.





