ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಊಟದಲ್ಲಿ ಹುಳುಗಳು ಕಂಡುಬಂದಿರುವುದನ್ನು ಖಂಡಿಸಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಅಧಿಕಾರಿ ಶಾರದಾದೇವಿ ಅವರನ್ನು ಅಮಾನತು ಮಾಡುವಂತೆ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅಧ್ಯಕ್ಷ ಪ್ರದೀಪ್ ಅಣಬಿ ಮಾತನಾಡಿ, “ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಶಹಾಪುರ ನಗರದ ಕನ್ಯಾಕೋಳೂರು ರೋಡ, ಶಿವನ ದೇವಸ್ಥಾನದ ಹತ್ತಿರ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ವಸತಿ ನಿಲಯವು ಸಂಪೂರ್ಣ ಅಧೋಗತಿಗೆ ಬಂದು ನಿಂತಿದೆ. ಇದು ಕೇವಲ ಹೆಸರಿಗೆ ಮಾತ್ರ ವಿದ್ಯಾರ್ಥಿಗಳ ವಸತಿ ನಿಲಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಊಟದಲ್ಲಿ ದೊಡ್ಡ ದೊಡ್ಡ ಹುಳುಗಳು ಕಂಡುಬಂದಿದ್ದು, ವಾರ್ಡನ್ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದು ಒಂದು ದಿನದ ಸಮಸ್ಯೆಯಲ್ಲ. ಹಲವಾರು ದಿನಗಳಿಂದ ಇದೇ ರೀತಿ ಕಂಡುಬರುತ್ತಿರುವ ಬಗ್ಗೆ ವಿದ್ಯಾರ್ಥಿಗಳು ನಮ್ಮ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾದರೆ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿ ಜೀವಕ್ಕೆ ತೊಂದರೆ ಉಂಟಾದರೆ ಯಾರು ಹೊಣೆ” ಎಂದು ಪ್ರಶ್ನಿಸಿದರು.
“ಇಲ್ಲಿ ಅನೇಕ ಮೂಲ ಸೌಲಭ್ಯಗಳು ಇಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಕಾಲೇಜು ಮುಗಿದ ಬಳಿಕ ವಿದ್ಯಾಭ್ಯಾಸಕ್ಕೆ ಯೋಗ್ಯ ಸ್ಥಳವೆಂದರೆ ವಿದ್ಯಾರ್ಥಿ ವಸತಿನಿಲಯ. ಆದರೆ, ಸದರಿ ವಿದ್ಯಾರ್ಥಿ ವಸತಿನಿಲಯದ ಅವ್ಯವಸ್ಥೆಗಳ ಬಗ್ಗೆ ಸದರಿ ವಿದ್ಯಾರ್ಥಿಗಳು ಲಿಖಿತವಾಗಿ ತಿಳಿಸಿದ್ದಾರೆ. ಉಲ್ಲೇಖದಲ್ಲಿ ತಿಳಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೂ ದೂರು ಸಲ್ಲಿಸಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಬಡ ವಿದ್ಯಾರ್ಥಿಗಳ ಜೀವದ ಜತೆಗೆ ಚೆಲ್ಲಾಟ ಆಡುತ್ತಿರುವ ತಾಲೂಕು ಅಧಿಕಾರಿ ಶಾರದಾದೇವಿ ಅವರನ್ನು ಕೂಡಲೇ ಅಮಾನತುಗೊಳಿಸಿ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಮೂಲಸೌಕರ್ಯ ಹಾಗೂ ಕಲಿಕಾ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೆರೆ ಹಾಗೂ ಚೆಕ್ ಡ್ಯಾಮ್‌ಗಳಲ್ಲಿ ಭ್ರಷ್ಟಾಚಾರ, ಕಳಪೆ ಕಾಮಗಾರಿ ವಿರುದ್ಧ ರೈತ ರೇವಣ್ಣ ಉಪವಾಸ ಸತ್ಯಾಗ್ರಹ
ಈ ಸಂದರ್ಭದಲ್ಲಿ ಶರಣು ದೋರನಹಳ್ಳಿ, ಅಂಬ್ರೇಶ ಶಿರವಾಳ, ಭೋಜಪ್ಪ ಮುಂಡಾಸ, ವಿದ್ಯಾರ್ಥಿಗಳಾದ ಜಗದೀಶ, ಹೊನ್ನಯ್ಯ, ದಾವಲಸಾಬ, ನವಾಜ, ಅಬ್ದುಲ್, ರಫೀಕ್, ಉಸ್ಮಾನ್, ದೇವರಾಜ, ದಾವೂದ, ಬಿಲಾಲ, ಆಕಾಶ, ಸಾಬಣ್ಣ ಸೇರಿದಂತೆ ಬಹುತೇಕ ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳು ಇದ್ದರು.
