ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸುರಪುರ ತಾಲೂಕು ಸಮಿತಿ ವತಿಯಿಂದ ಪಟ್ಟಣದ ಗಾಂಧಿ ವೃತ್ತದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಟೇಲರ್ ಮಂಜಿಲ್‌ನಲ್ಲಿ ಸಭೆ ಸೇರಿ 154ನೇ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಹಣಮಂತರಾಯ ಮಡಿವಾಳರ ಸುರಪುರ ಮಾತನಾಡಿ, “ಗಾಂಧೀಜಿಯವರು 1859ರ ಅಕ್ಟೋಬರ್ ೦೨ರಂದು ಜನಿಸಿದರು. ನಮ್ಮ ದೇಶದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ನಂತರ ಅವರನ್ನು ಮಹಾತ್ಮ ಎಂದು ಕರೆಯಲಾಯಿತು. ಏಕೆಂದರೆ, ಅವರು ತಾಳ್ಮೆ, ಸಹನೆ, ಅಹಿಂಸೆಯಿಂದ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಂದು ಅವರೆಲ್ಲ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ, ಇಂದು ಎಲ್ಲಾ ಜಾತಿ ಜನಾಂಗದವರು ನೆಮ್ಮದಿಯಿಂದ ಬಾಳಬೇಕಾಗಿದೆ. ಇಲ್ಲವಾದಲ್ಲಿ ನಾವಿನ್ನೂ ಪರಕೀಯರ ಗುಲಾಮಗಿರಿಯಲ್ಲಿ ಇರಬೇಕಾಗಿರುತ್ತಿತ್ತು. ಅವರನ್ನು ನಾವು ಇವತ್ತು ಸ್ಮರಿಸಬೇಕು.
ಇದೇ ವೇಳೆ, ರಾಜ್ಯದ 161 ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಿದೆ. ಆದರೆ, ಯಾದಗಿರಿ ಜಿಲ್ಲೆಯ ಆರು ತಾಲೂಕುಗಳ ಪೈಕಿ ಕೇವಲ ಎರಡು ತಾಲೂಕುಗಳಾದ ಶಹಾಪುರ, ವಡಿಗೇರಾ ಬರಗಾಲವೆಂದು ಘೋಷಣೆ ಮಾಡಿದ್ದಾರೆ. ಇನ್ನುಳಿದ ಸುರಪುರ, ಹುಣಸಗಿ, ಗುರುಮಿಠಕಲ್, ಯಾದಗಿರಿ ಈ ನಾಲ್ಕು ತಾಲೂಕುಗಳಲ್ಲಿ ಸಾಧಾರಣ ಬರಗಾಲವೆಂದು ಘೋಷಣೆ ಮಾಡಿ, ಮಲತಾಯಿ ಧೋರಣೆ ತೋರಿಸಿರುವುದು ಖಂಡನೀಯ. ಈ ಕೂಡಲೇ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ, ರೈತರಿಗೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹುಣಸಗಿ ತಾಲೂಕಾ ಅಧ್ಯಕ್ಷ ಸಾಹೇಬಗೌಡ ಮದಲಿಂಗನಾಳ, ಸುರಪುರ ತಾಲೂಕ ಸಂಚಾಲಕ ಭೀಮಣ್ಣ ತಿಪ್ಪನಟಗಿ, ನಿಂಗನಗೌಡ ಗುಳಬಾಳ ಗ್ರಾಮ ಘಟಕ ಅಧ್ಯಕ್ಷ ಭೀಮಣ್ಣಗೌಡ ಕರ್ನಾಳ, ಸುರಪುರ ತಾಲೂಕಾ ಉಪಾಧ್ಯಕ್ಷ ಶಂಕ್ರಪ್ಪ ಗುಳಬಾಳ ಸೇರಿದಂತೆ ಇನ್ನಿತರರು ಹಾಜರಿದ್ದರು.