ಯಾದಗಿರಿ ಕ್ಷೇತ್ರ ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಮೂರು ದಿನಗಳ ಎಲ್ಎಸ್ಟಿಡಿ (ಲೈಫ್ ಸ್ಕೂಲ್ ಫಾರ್ ಟ್ರಾನ್ಸ್ಫಾರ್ಮೇಶನ್ ಡೆವಲಪ್ಮೆಂಟ್) ಕಾರ್ಯಕ್ರಮವು ಬುಧವಾರ ವರ್ಲ್ಡ್ ವಿಷನ್ ಇಂಡಿಯಾ ನೇತೃತ್ವದಲ್ಲಿ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಅನಿಲ್ ತೇಜಪ್ಪ ಬಲ್ಲೂರುಕರ ಅವರು ಮಾತನಾಡಿ, ‘ಮಕ್ಕಳ ಉತ್ತಮ ಬೆಳವಣಿಗೆಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ನೈತಿಕ ಮೌಲ್ಯಗಳ ಶಿಕ್ಷಣವೂ ಅಗತ್ಯವಾಗಿದೆ ಎಂದು ಹೇಳಿದರು. ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಬದುಕಿನ ಅರಿವು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ’ ಎಂದು ಅವರು ತಿಳಿಸಿದರು.
ನಾಗರಾಜ ತಣಿಕೇದಾರ ಮಾತನಾಡಿ, ‘ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಾನತೆ, ಶಿಕ್ಷಣ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಶಾಲಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಪ್ಪ ಜೇಗಿರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗಪ್ಪ ವಳಗಿನಮಣಿ, ಹನುಮಂತ ವಳಗಿನಮಣಿ ಹಾಗೂ ಯಮನಪ್ಪ ಗುತ್ತೇದಾರ ಉಪಸ್ಥಿತರಿದ್ದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು, ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಕಾಳಜಿ, ಪೌಷ್ಟಿಕ ಆಹಾರ, ಪರಿಸರ ಸಂರಕ್ಷಣೆ, ಬಾಲ್ಯ ವಿವಾಹ ತಡೆ ಹಾಗೂ ಮಕ್ಕಳ ಸುರಕ್ಷತೆ ಕುರಿತು ವಿಶೇಷ ತರಬೇತಿ ನೀಡಲಾಯಿತು. ಜೊತೆಗೆ ಗುಂಪು ಚರ್ಚೆ, ಆಟೋಟ ಸ್ಪರ್ಧೆಗಳು, ಚಿತ್ರಕಲೆ, ಪ್ರಬಂಧ, ಹಾಡುಗಾರಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಬೆಳೆಸುವ ಪ್ರಯತ್ನ ಮಾಡಲಾಯಿತು.
ಸುಮಾರು 200 ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಶಿಕ್ಷಣ ಪ್ರೋತ್ಸಾಹ, ಆರೋಗ್ಯ ಜಾಗೃತಿ ಹಾಗೂ ನಾಯಕತ್ವ ಕೌಶಲ್ಯ ಬೆಳೆಸುವ ಉದ್ದೇಶದಿಂದ ವಿವಿಧ ತರಬೇತಿಗಳನ್ನು ನೀಡಲಾಯಿತು. ಪರಿಹಾರ ಬೋಧನಾ ಕೇಂದ್ರಗಳಲ್ಲಿ ಉತ್ತಮ ಅಂಕ ಗಳಿಸಿದ 12 ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ಸೇತುವೆಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಕಾರ್ಯಕ್ರಮದಲ್ಲಿ ಮೆಕಯಲ್, ಸ್ವಯಂಸೇವಕರಾದ ಸಿದ್ದಮ್ಮ ಮಲ್ಲಿಕಾರ್ಜುನ್, ಶರಣಪ್ಪ, ಮೇನಕ ಚೌಹಾಣ್ ಹಾಗೂ ಶಿಕ್ಷಕಿ ಮಹಾಲಕ್ಷ್ಮಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೋಹನ್ ಕುಮಾರ್ ಹೊಸಮನಿ ನಿರೂಪಿಸಿ, ಮಾರ್ಟಿನ್ ಶಾಂತಕುಮಾರ್ ವಂದನಾರ್ಪಣೆ ಮಾಡಿದರು.





