ನೌಕರರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟ ನೌಕರರು, ಕಟ್ಟಡ ಕಾರ್ಮಿಕರು ಹಾಗೂ ಗ್ರಾಮ ಕಾಯಕ ಮಿತ್ರರು ಶುಕ್ರವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಸಮಿತಿಯ ತೀರ್ಮಾನದಂತೆ ಆಯೋಜಿಸಲಾದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು, ‘ಹಲವು ಬಾರಿ ಮನವಿಗಳನ್ನು ಸಲ್ಲಿಸಿ ಹೋರಾಟ ನಡೆಸಿದರೂ ಅಧಿಕಾರಿಗಳು ಬೇಡಿಕೆಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೌಕರರ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದರಿಂದ ಅನಿವಾರ್ಯವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.
ಪ್ರತಿಭಟನಾಕಾರರು ‘ಗ್ರಾಮ ಪಂಚಾಯತಿ ಕರ ವಸೂಲಿಗಾರರ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಆದೇಶದಂತೆ ಸರಿಪಡಿಸಿ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು. ಹಲವು ತಿಂಗಳಿನಿಂದ ಬಾಕಿ ಉಳಿದಿರುವ ವೇತನವನ್ನು ತಕ್ಷಣ ಪಾವತಿಸಬೇಕು ಹಾಗೂ ನಿವೃತ್ತಿ ಉಪಧನ ನೀಡುವಂತೆ ಆಗ್ರಹಿಸಿದರು. ಬಾಕಿ ಉಳಿದ ಅನುಮೋದನೆಗಳನ್ನು ಶೀಘ್ರ ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

‘ಕರ ವಸೂಲಿ ಅಭಿಯಾನದ ಹೆಸರಿನಲ್ಲಿ ಕೆಳಹಂತದ ನೌಕರರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಇಂತಹ ಒತ್ತಡದ ನೀತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಯಾದಗಿರಿ ಜಿಲ್ಲೆಯ ಎಲ್ಲಾ ನೌಕರರಿಗೆ ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಸಬೇಕು ಹಾಗೂ ತರಬೇತಿ ಪಡೆದ ನೌಕರರಿಗೆ ಸೂಕ್ತ ಕೆಲಸ ನೀಡಬೇಕು’ ಎಂದು ಆಗ್ರಹಿಸಿದರು.
‘ಅಂಗನವಾಡಿ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಧಿಕಾರಿಗಳ ಕಿರುಕುಳವನ್ನು ನಿಲ್ಲಿಸಬೇಕು ಎಂದು ಮಹಿಳಾ ನೌಕರರು ಒತ್ತಾಯಿಸಿದರು. ಕೆಲವು ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಕೇಂದ್ರಗಳ ಜವಾಬ್ದಾರಿ ನೀಡಿರುವುದರಿಂದ ದಾಖಲೆ ನಿರ್ವಹಣೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಅವರು ಹೇಳಿದರು. ಇದೇ ರೀತಿ ಬಿಸಿ ಊಟ ನೌಕರರ ಮೇಲೂ ದೌರ್ಜನ್ಯ ನಡೆಯುತ್ತಿದ್ದು, ಎಸ್.ಡಿ.ಎಂ.ಸಿ ಸಮಿತಿಯವರ ಕಿರುಕುಳವನ್ನು ತಡೆಗಟ್ಟಬೇಕು’ ಎಂದು ಮನವಿ ಮಾಡಿದರು.
‘ಕಟ್ಟಡ ಕಾರ್ಮಿಕರು ಸಲ್ಲಿಸುವ ಅರ್ಜಿಗಳನ್ನು ಅನಗತ್ಯವಾಗಿ ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದ ಕಾರ್ಮಿಕರು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಎಲ್ಲ ಅರ್ಹ ಕಾರ್ಮಿಕರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ಗ್ರಾಮ ಕಾಯಕ ಮಿತ್ರರಿಗೆ ಮಾನವ ದಿನಗಳನ್ನು ನೀಡಬೇಕು, ಮೊಬೈಲ್ ರಿಚಾರ್ಜ್ ಸೌಲಭ್ಯ ಕಲ್ಪಿಸಬೇಕು, ಸಂಚಾರ ಭತ್ಯೆ ನೀಡಬೇಕು ಹಾಗೂ ಪ್ರತಿ ತಿಂಗಳು 5ರಂದು ವೇತನ ಪಾವತಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಇದಲ್ಲದೆ ಗ್ರಾಮ ಕಾಯಕ ಮಿತ್ರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು, ಎಲ್ಲಾ ನೌಕರರಿಗೂ ರೂ.5000 ವೇತನ ಹೆಚ್ಚಳ ಮಾಡಬೇಕು ಹಾಗೂ ಸೇವಾ ಹಿರಿತನದ ಆಧಾರದಲ್ಲಿ ವೇತನ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಿವೃತ್ತಿ ಅಥವಾ ನಿಧನ ಹೊಂದಿದ ನೌಕರರ ಕುಟುಂಬಕ್ಕೆ ರೂ.6 ಲಕ್ಷ ಪರಿಹಾರ ನೀಡಬೇಕು’ ಎಂದು ಬೇಡಿಕೆ ಇಟ್ಟರು.

ಪ್ರತಿ ಪಂಚಾಯತಿಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಆರೋಗ್ಯ ಇಲಾಖೆಯ ನಮೂನೆಯಲ್ಲಿ ಪಂಚಾಯತ್ ನೌಕರರ ಮಾಹಿತಿಯನ್ನು ಸೇರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು’ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಎಸ್ಟಿಡಿ ಕಾರ್ಯಕ್ರಮ
ಈ ಪ್ರತಿಭಟನೆಯಲ್ಲಿ ಎಂ.ಬಿ. ನಾಡುಗೌಡು, ಜೈಲಾಲ್ ತೋಟದಮನಿ, ಮಲ್ಲಿಕಾರ್ಜುನ್ ಬಳಿಚಕ್ರ, ಅನಿತಾ ಹಿರೇಮಠ, ಬಸವರಾಜ್ ದೊರ, ಮುನಿಯಪ್ಪಗೌಡ, ಬಸಲಿಂಗಮ್ಮ ನಾಟೇಕರ್, ಬಸಮ್ಮ ಆಲ್ಯಾಳ, ರಮೇಶ್ ಸುರಪುರ, ಶಾಹಿಜಾಬ್ ಬೇಗಂ, ದೇವೇಂದ್ರ ಕುಮಾರ್, ಈರಮ್ಮ, ಭೀಮಬಾಯಿ, ರೇಣುಕಾ ಸುರಪುರ, ನಿಂಗಣ್ಣ ಅಯ್ಯಾಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ನೌಕರರು ಭಾಗವಹಿಸಿದ್ದರು.




